ತೃತೀಯ ಟೆಸ್ಟ್: ಭಾರತ ಅಪಾಯದಿಂದ ಪಾರು
ಕ್ರಮಾಂಕದಲ್ಲಿ ನಿತೀಶ್ ರೆಡ್ಡಿ- ವಾಶಿಂಗ್ಟನ್ ಸುಂದರ್ ಸಾಹಸದ ಜೊತೆಯಾಟ
PC : NDTV
ಮೆಲ್ಬರ್ನ್: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಮೂರನೇ ದಿನವಾದ ಶನಿವಾರ ನಿತೀಶ್ ಕುಮಾರ್ ರೆಡ್ಡಿ ಭಾರತದ ರಕ್ಷಣೆಗೆ ಧಾವಿಸಿ ತಂಡವನ್ನು ತಕ್ಷಣದ ಅಪಾಯದಿಂದ ಪಾರು ಮಾಡಿದ್ದಾರೆ. ನಿನ್ನೆಯವರೆಗೂ ಕೆಂಪು ಚೆಂಡಿನ (ಟೆಸ್ಟ್) ಕ್ರಿಕೆಟ್ನಲ್ಲಿ ಅನಾಮಧೇಯರಾಗಿಯೇ ಉಳಿದಿದ್ದ ರೆಡ್ಡಿ, ತನ್ನ ಚೊಚ್ಚಲ ಶತಕ ಬಾರಿಸಿ, ಬಾಕ್ಸಿಂಗ್ ಡೇ ಟೆಸ್ಟನ್ನು ಗೆಲ್ಲುವ ಆಸ್ಟ್ರೇಲಿಯದ ಪ್ರಯತ್ನಗಳಿಗೆ ತೀವ್ರ ಸವಾಲು ಒಡ್ಡಿದ್ದಾರೆ.
ಮಳೆ ಮತ್ತು ಮಂದ ಬೆಳಕಿನಿಂದಾಗಿ ಮೂರನೇ ದಿನದ ಆಟವವನ್ನು ಬೇಗನೇ ಮುಕ್ತಾಯಗೊಳಿಸಲಾಯಿತು.
ರೆಡ್ಡಿಯ ಅಜೇಯ 105 ರನ್ಗಳ ನೆರವಿನಿಂದ ಭಾರತವು ತನ್ನ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ಗಳ ನಷ್ಟಕ್ಕೆ 358 ರನ್ಗಳನ್ನು ಕಲೆ ಹಾಕಿದೆ. ಅದು ಈಗಲೂ ಆಸ್ಟ್ರೇಲಿಯದ ಮೊದಲ ಇನಿಂಗ್ಸ್ ಮೊತ್ತ 474ರಿಂದ 116 ರನ್ಗಳ ಹಿನ್ನಡೆಯಲ್ಲಿದೆ.
ಮೆಲ್ಬರ್ನ್ ಕ್ರಿಕೆಟ್ ಮೈದಾನದ ಸಪಾಟು ಪಿಚ್ನಿಂದ ಬೌಲರ್ಗಳು ಹೆಚ್ಚಿನ ನೆರವು ಪಡೆಯುತ್ತಿಲ್ಲ. ಹಾಗಾಗಿ, ಈ ಟೆಸ್ಟ್ ಪಂದ್ಯವನ್ನು ಉಳಿಸಿಕೊಳ್ಳುವುದು ಭಾರತಕ್ಕೆ ಸಾಹಸದ ವಿಷಯವೇನೂ ಆಗಲಾರದು.
ಶನಿವಾರ ಭಾರತದ ಪ್ರತಿ ಹೋರಾಟದ ನೇತೃತ್ವವನ್ನು ರೆಡ್ಡಿ ವಹಿಸಿದರು. ರೆಡ್ಡಿ ಮತ್ತು ವಾಶಿಂಗ್ಟನ್ ಸುಂದರ್ (162 ಎಸೆತಗಳಲ್ಲಿ 50 ರನ್) 127 ರನ್ಗಳ ಅಮೋಘ ಜೊತೆಯಾಟವನ್ನು ಆಡಿ ಭಾರತವನ್ನು ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕುಸಿತದಿಂದ ಪಾರು ಮಾಡಿದರು.
ರೆಡ್ಡಿಯ ಇನಿಂಗ್ಸ್ ಅತ್ಯಂತ ಶ್ರೇಷ್ಠ ಟೆಸ್ಟ್ ಇನಿಂಗ್ಸ್ಗಳ ಪೈಕಿ ಒಂದು ಎಂಬುದಾಗಿ ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್ ಬಣ್ಣಿಸಿದ್ದಾರೆ. ರಿಶಭ್ ಪಂತ್ (28) ನಿರ್ಲಕ್ಷ್ಯದ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡಾಗ ಭಾರತದ ಸ್ಕೋರ್ 6 ವಿಕೆಟ್ಗಳ ನಷ್ಟಕ್ಕೆ ಕೇವಲ 191 ಆಗಿತ್ತು. ಇಂಥ ಅನಿಶ್ಚಿತ ಪರಿಸ್ಥಿತಿಯಿಂದ ರೆಡ್ಡಿ ಮತ್ತು ಸುಂದರ್ ಭಾರತವನ್ನು ಮೇಲೆತ್ತಿದರು.
ಒಂದು ಹಂತದಲ್ಲಿ, ರೆಡ್ಡಿ ಶತಕವನ್ನು ಪೂರೈಸುತ್ತಾರೊ ಇಲ್ಲವೋ ಎಂಬ ಸಂದೇಹವೂ ಭಾರತೀಯ ಪಾಳಯವನ್ನು ಕಾಡಿತು. ರೆಡ್ಡಿ 99 ರನ್ ಗಳಿಸಿದ್ದಾಗ ವಾಶಿಂಗ್ಟನ್ ಸುಂದರ್ ನಿರ್ಗಮಿಸಿದರು. ಬಳಿಕ ಬಂದ ಜಸ್ಪ್ರೀತ್ ಬುಮ್ರಾ ಶೂನ್ಯಕ್ಕೆ ವಾಪಸಾದಾಗ ಈ ಭೀತಿ ತಲೆದೋರಿತು. ಯಾಕೆಂದರೆ, ನಂತರ ಬ್ಯಾಟಿಂಗ್ಗೆ ಬರಲಿದ್ದವರು ಕೊನೆಯ ಬ್ಯಾಟರ್ ಮುಹಮ್ಮದ್ ಸಿರಾಜ್.
ಸಿರಾಜ್ ಮೈದಾನಕ್ಕೆ ಇಳಿದಾಗ ಆಸ್ಟ್ರೇಲಿಯನ್ ಪ್ರೇಕ್ಷಕರಿಂದ ಇನ್ನೊಂದು ಸುತ್ತಿನ ಅಪಹಾಸ್ಯದ ಧ್ವನಿಯನ್ನು ಎದುರಿಸಿದರು. ಅವರು ಆತಿಥೇಯ ನಾಯಕ ಪ್ಯಾಟ್ ಕಮಿನ್ಸ್ರ ಮೂರು ಎಸೆತಗಳನ್ನು ಎದುರಿಸಿದರು. ಸಿರಾಜ್ ಪ್ರತಿಯೊಂದು ಎಸೆತವನ್ನು ಎದುರಿಸುವಾಗಲೂ ರೆಡ್ಡಿ ಮತ್ತು ಅವರ ತಂದೆ ಮುತ್ಯಾಲರ ಮುಖಭಾವ ಬದಲಾಗುತ್ತಿತ್ತು. ಆದರೆ, ಸಿರಾಜ್ ಆ ಎಸೆತಗಳನ್ನು ಎದುರಿಸಿ ಔಟಾಗದೆ ಉಳಿದು ರೆಡ್ಡಿಗೆ ಬ್ಯಾಟಿಂಗ್ಗೆ ಅವಕಾಶ ಮಾಡಿಕೊಟ್ಟರು.
ನಂತರ ಸ್ಕಾಟ್ ಬೊಲ್ಯಾಂಡ್ರ ಎಸೆತವನ್ನು ರೆಡ್ಡಿ ಸ್ಟ್ರೇಟ್ ಡ್ರೈವ್ ಮೂಲಕ ಬೌಂಡರಿಗೆ ತಳ್ಳಿ ಶತಕವನ್ನು ಪೂರೈಸಿದರು. 21 ವರ್ಷದ ರೆಡ್ಡಿ ಅರ್ಧ ಶತಕ ಪೂರೈಸಿದ್ದಾಗ ‘ಪುಷ್ಪ’ ಪೋಸ್ ನೀಡಿದ್ದರು ಮತ್ತು ಶತಕ ಸಿಡಿಸಿದಾಗ ‘ಬಾಹುಬಲಿ’ ಶೈಲಿಯನ್ನು ನಾಟಕೀಯವಾಗಿ ಅನುಕರಿಸಿದರು.
ರೆಡ್ಡಿಯ ಆಕ್ರಮಣಕಾರಿ ಆಟವು ಆಸ್ಟ್ರೇಲಿಯವನ್ನು ಮತ್ತೆ ಒತ್ತಡಕ್ಕೆ ಸಿಲುಕಿಸಿದೆ.
ಆಟ ಮುಂದುವರಿಯುತ್ತಿದ್ದಂತೆಯೇ, ಮೆಲ್ಬರ್ನ್ ಕ್ರಿಕೆಟ್ ಮೈದಾನದ ಪಿಚ್ ಬ್ಯಾಟಿಂಗ್ಗೆ ಪೂರಕವಾಗಿ ಪರಿಣಮಿಸಿತು.
ಎರಡನೇ ಹೊಸ ಚೆಂಡು ಆಸ್ಟ್ರೇಲಿಯನ್ ಬೌಲರ್ಗಳಿಗೆ ನೆರವು ನೀಡಲಿಲ್ಲ. ರೆಡ್ಡಿ ಮತ್ತು ವಾಶಿಂಗ್ಟನ್ ಸುಂದರ್ ವಿಕೆಟ್ಗಳ ನಡುವೆ ಚೆನ್ನಾಗಿ ಓಡುತ್ತಾ ರನ್ಗಳನ್ನು ಕೂಡಿಸುತ್ತಾ ಮೊದಲ ಇನಿಂಗ್ಸ್ ಕೊರತೆಯನ್ನು ತುಂಬುತ್ತಿದ್ದರು.
ಮುನ್ನಾ ದಿನ 4 ರನ್ ಗಳಿಸಿ ಅಜೇಯವಾಗಿ ಉಳಿದಿದ್ದ ರವೀಂದ್ರ ಜಡೇಜ 17 ರನ್ ಮಾಡಿ ನಿರ್ಗಮಿಸಿದರು. 5 ವಿಕೆಟ್ಗಳ ನಷ್ಟಕ್ಕೆ 164 ರನ್ ಇದ್ದಲ್ಲಿಂದ ತನ್ನ ಮೊದಲ ಇನಿಂಗ್ಸನ್ನು ಶನಿವಾರ ಮುಂದುವರಿಸಿದ ಭಾರತವು ಮಳೆಯಿಂದಾಗಿ ದಿನದಾಟ ಬೇಗನೇ ನಿಂತಾಗ ಇನಿಂಗ್ಸನ್ನು 9 ವಿಕೆಟ್ಗಳ ನಷ್ಟಕ್ಕೆ 358ರವರೆಗೆ ಬೆಳೆಸುವಲ್ಲಿ ಯಶಸ್ವಿಯಾಯಿತು.