ನಾಳೆಯಿಂದ ಮೂರನೇ ಟೆಸ್ಟ್ ಆರಂಭ: ಭಾರತಕ್ಕೆ ನಿರ್ಣಾಯಕ ಪಂದ್ಯ
ರಾಜ್ಕೋಟ್: ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಗುರುವಾರ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ನಲ್ಲಿ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯವನ್ನು ಆಡಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯು ಸದ್ಯ 1-1ರಿಂದ ಸಮಬಲದಲ್ಲಿದೆ.
ಯಶಸ್ವಿ ಜೈಸ್ವಾಲ್ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಅತ್ಯಮೋಘ ಪ್ರದರ್ಶನದ ನೆರವಿನಿಂದ ಭಾರತವು ವಿಶಾಖಪಟ್ಟಣದಲ್ಲಿ ನಡೆದಿದ್ದ 2ನೇ ಟೆಸ್ಟ್ ಪಂದ್ಯದಲ್ಲಿ 106 ರನ್ ಜಯ ಸಾಧಿಸಿ ಪ್ರತಿಹೋರಾಟ ಒಡ್ಡಿತ್ತು. ಆದಾಗ್ಯೂ ಭಾರತದ ಮಧ್ಯಮ ಸರದಿಯಲ್ಲಿ ಅಸ್ಥಿರ ಪ್ರದರ್ಶನವು ಕಳವಳಕ್ಕೆ ಕಾರಣವಾಗಿದೆ.
ನಾಯಕ ರೋಹಿತ್ ಶರ್ಮಾ ಇತ್ತೀಚೆಗಿನ ದಿನಗಳಲ್ಲಿ ಬ್ಯಾಟಿಂಗ್ ನಲ್ಲಿ ಪರದಾಟ ನಡೆಸುತ್ತಿದ್ದು, ಹಿರಿಯ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅನುಪಸ್ಥಿತಿಯು ಭಾರತದ ಕಳವಳವನ್ನು ಹೆಚ್ಚಿಸಿದೆ.
ಗಾಯದ ಸಮಸ್ಯೆ ಎದುರಿಸುತ್ತಿರುವ ಟೀಮ್ ಇಂಡಿಯಾದ ಪರ ದೇಶೀಯ ಕ್ರಿಕೆಟ್ ರನ್ ಯಂತ್ರ ಸರ್ಫರಾಝ್ ಖಾನ್ ಹಾಗೂ ಹಾರ್ಡ್ ಹಿಟ್ಟಿಂಗ್ ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಮೊದಲ ಪಂದ್ಯವನ್ನಾಡುವ ನಿರೀಕ್ಷೆಯಲ್ಲಿದ್ದಾರೆ.
ಶ್ರೇಯಸ್ ಅಯ್ಯರ್ರನ್ನು ತಂಡದಿಂದ ಕೈಬಿಡಲಾಗಿದ್ದು ರಾಹುಲ್ ಇನ್ನಷ್ಟೇ ಗಾಯದಿಂದ ಚೇತರಿಸಿಕೊಳ್ಳಬೇಕಾಗಿರುವ ಕಾರಣ ಮುಂಬೈನ ಯುವ ಬ್ಯಾಟರ್, ರಣಜಿ ಟ್ರೋಫಿಯಲ್ಲಿ ಸಾಕಷ್ಟು ರನ್ ಕಲೆ ಹಾಕಿರುವ ಸರ್ಫರಾಝ್ ಖಾನ್ ದೀರ್ಘ ಸಮಯದಿಂದ ನಿರೀಕ್ಷಿಸುತ್ತಿದ್ದ ಟೆಸ್ಟ್ ಕ್ಯಾಪ್ ಧರಿಸುವ ನಿರೀಕ್ಷೆ ಇದೆ. ಹೊಸ ಮುಖ ರಜತ್ ಪಾಟಿದಾರ್ ಜೊತೆಗೆ ಸರ್ಫರಾಝ್ ಸೇರ್ಪಡೆಯು ಭಾರತದ ಬ್ಯಾಟಿಂಗ್ ಸರದಿಯಲ್ಲಿ ಬದಲಾವಣೆ ತರಲಿದೆ.
ಭಾರತದ ವಿಕೆಟ್ ಕೀಪರ್ ಕೆ.ಎಸ್. ಭರತ್ ಅವರ ಬ್ಯಾಟಿಂಗ್ ವೈಫಲ್ಯವು ತಂಡದಲ್ಲಿ ಮಧ್ಯಮ ಸರದಿಯಲ್ಲಿ ಬ್ಯಾಟರ್ ಅಗತ್ಯವನ್ನು ಒತ್ತಿ ಹೇಳುತ್ತಿದೆ. ಆಕ್ರಮಣಕಾರಿ ಆಟದ ಮೂಲಕ ಖ್ಯಾತಿ ಪಡೆದಿರುವ ಉತ್ತರಪ್ರದೇಶದ ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಅವರು ಭರತ್ ಸ್ಥಾನ ತುಂಬುವ ಸಾಧ್ಯತೆ ಇದೆ.
ರೋಹಿತ್ ಶರ್ಮಾ ಅವರು ಯಶಸ್ವಿ ಜೈಸ್ವಾಲ್ರೊಂದಿಗೆ ಇನಿಂಗ್ಸ್ ಆರಂಭಿಸುವುದು ನಿಶ್ಚಿತ. ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಒಂದೂ ಅರ್ಧಶತಕವನ್ನು ಗಳಿಸಿಲ್ಲ. ರೋಹಿತ್ ಗೆ ಎದುರಾಳಿಯನ್ನು ನಡುಗಿಸುವ ಸಾಮರ್ಥ್ಯ ಈಗಲೂ ಇದೆ. ಗುರುವಾರ 7ನೇ ಟೆಸ್ಟ್ ಪಂದ್ಯವನ್ನು ಆಡಲಿರುವ ಜೈಸ್ವಾಲ್ ಸದ್ಯ ರೆಡ್ ಹಾಟ್ ಫಾರ್ಮ್ನಲ್ಲಿದ್ದಾರೆ. 22ರ ಹರೆಯದ ಜೈಸ್ವಾಲ್ 2ನೇ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸರಣಿಯಿಂದ ಹಿಂದೆ ಸರಿದ ಕಾರಣ ಶುಭಮನ್ ಗಿಲ್ ಮೂರನೇ ಕ್ರಮಾಂಕಕ್ಕೆ ಉತ್ತಮ ಆಯ್ಕೆಯಾಗಿದ್ದಾರೆ. ಕಳಪೆ ಫಾರ್ಮ್ಗೆ ಸಂಬಂಧಿಸಿ ಸಾಕಷ್ಟು ಟೀಕೆ ಎದುರಿಸುತ್ತಿರುವ 24ರ ಹರೆಯದ ಗಿಲ್ 2ನೇ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದರು. ರಜತ್ ಪಾಟಿದಾರ್ 2ನೇ ಟೆಸ್ಟ್ ನಲ್ಲಿ ಚೊಚ್ಚಲ ಪಂದ್ಯ ಆಡಿದ್ದರು. ಆದರೆ ಕೇವಲ 32 ರನ್ ಗಳಿಸಿದ್ದರು. ಶ್ರೇಯಸ್ ಅಯ್ಯರ್ ಅನುಪಸ್ಥಿತಿಯು ಪಾಟಿದಾರ್ ಸ್ಥಾನವನ್ನು ಭದ್ರಪಡಿಸಿದೆ.
ರಾಹುಲ್ ಸಂಪೂರ್ಣ ಫಿಟ್ ಆಗದ ಹಿನ್ನೆಲೆಯಲ್ಲಿ ರಣಜಿ ಟ್ರೋಫಿ ಸ್ಟಾರ್ ಬ್ಯಾಟರ್ ಸರ್ಫರಾಝ್ ಖಾನ್ ಚೊಚ್ಚಲ ಪಂದ್ಯವನ್ನಾಡುವ ಸಾಧ್ಯತೆಯಿದೆ ವರದಿಯಾಗಿದೆ.
ಭಾರತದ ಬ್ಯಾಟಿಂಗ್ ಹಾಗೂ ಬೌಲಿಂಗ್ಗೆ ಶಕ್ತಿ ತುಂಬುತ್ತಿರುವ ಅಕ್ಷರ್ ಪಟೇಲ್ 2ನೇ ಟೆಸ್ಟ್ ನಲ್ಲಿ ಎರಡೇ ವಿಕೆಟ್ ಪಡೆದಿದ್ದರು. ಮೂರನೇ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ. ಗಾಯದ ಸಮಸ್ಯೆಯಿಂದ ರವೀಂದ್ರ ಜಡೇಜ 2ನೇ ಟೆಸ್ಟ್ ನಲ್ಲಿ ಆಡಿರಲಿಲ್ಲ. ಗುರುವಾರದ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಜಡೇಜ ಮೊದಲ ಟೆಸ್ಟ್ ನಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದಲ್ಲದೆ, ಮೊದಲ ಇನಿಂಗ್ಸ್ ನಲ್ಲಿ 87 ರನ್ ಗಳಿಸಿದ್ದರು.
ದ್ವಿತೀಯ ಟೆಸ್ಟ್ ಪಂದ್ಯದ ಹೀರೊ ವೇಗಿ ಜಸ್ಪ್ರೀತ್ ಬುಮ್ರಾ ಆಡುವ 11ರ ಬಳಗದಲ್ಲಿದ್ದಾರೆ. 2ನೇ ಪಂದ್ಯದಲ್ಲಿ ಬುಮ್ರಾ ಒಟ್ಟು 9 ವಿಕೆಟ್ ಗಳನ್ನು ಪಡೆದು ಭಾರತದ ಗೆಲುವಿಗೆ ನೆರವಾಗಿದ್ದರು. ಈ ಪ್ರದರ್ಶನದ ಮೂಲಕ ಬುಮ್ರಾ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದರು. ಕೆಲಸದ ಒತ್ತಡ ನಿಭಾಯಿಸುವ ಭಾಗವಾಗಿ 2ನೇ ಪಂದ್ಯದಲ್ಲಿ ಆಡದ ಮುಹಮ್ಮದ್ ಸಿರಾಜ್ 3ನೇ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಸಿರಾಜ್ ಒಂದೂ ವಿಕೆಟ್ ಪಡೆದಿರಲಿಲ್ಲ.
ಇಂಗ್ಲೆಂಡ್ ಆಡುವ 11ರ ಬಳಗ: ಝಾಕ್ ಕ್ರಾವ್ಲೆ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಜಾನಿ ಬೈರ್ಸ್ಟೋವ್, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್, ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್.
ಭಾರತದ ಆಡುವ 11ರ ಬಳಗ: ರೋಹಿತ್ ಶರ್ಮಾ(ನಾಯಕ), ಜಸ್ಪ್ರೀತ್ ಬುಮ್ರಾ(ಉಪ ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್,ಧ್ರುವ್ ಜುರೆಲ್(ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್.
ಪಂದ್ಯ ಆರಂಭದ ಸಮಯ: ಬೆಳಗ್ಗೆ 9:30