“ಇದು ಕ್ರಿಕೆಟ್ ಅಂಗಳದ ಸೌಹಾರ್ದ ಭೇಟಿ, ಇದರೊಂದಿಗೆ ರಾಜಕೀಯವನ್ನು ಬೆರೆಸಬಾರದು”
ಪಾಕಿಸ್ತಾನ ಭೇಟಿಯ ಕುರಿತು ಬಿಸಿಸಿಐ ಉಪಾಧ್ಯಕ್ಷ ಶುಕ್ಲಾ ಸ್ಪಷ್ಟೀಕರಣ
Photo- PTI
ಅಮೃತಸರ: ಏಶ್ಯಾಕಪ್ ಪಂದ್ಯವನ್ನು ವೀಕ್ಷಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ನೀಡಿದ್ದ ಆಮಂತ್ರಣವನ್ನು ಮನ್ನಿಸಿರುವ ಬಿಸಿಸಿಐನ ಹಿರಿಯ ಪದಾಧಿಕಾರಿಗಳಾದ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಉಪಾಧ್ಯಕ್ಷ ರಾಜೀವ್ ಶುಕ್ಲಾ, 17 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಅಟ್ಟಾರಿ-ವಾಘಾ ಗಡಿಯನ್ನು ದಾಟುವ ಮೂಲಕ ಲಾಹೋರ್ ತಲುಪಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿಸಿಸಿಐ ಉಪಾಧ್ಯಕ್ಷ ಶುಕ್ಲಾ ರಾಜೀವ್ ಶುಕ್ಲಾ “ಇದೊಂದು ಸೌಹಾರ್ಧ ಕ್ರೀಡಾ ಭೇಟಿ. ಇದರ ಜತೆ ರಾಜಕೀಯ ಬೆರೆಸಬೇಡಿ” ಎಂದು ಮನವಿ ಮಾಡಿದರು.
2008ರಲ್ಲಿ ನಡೆದಿದ್ದ ಏಶ್ಯಾ ಕಪ್ ನಲ್ಲಿ ಪಾಲ್ಗೊಳ್ಳಲು ಭಾರತೀಯ ತಂಡವು ಕೊನೆಯದಾಗಿ ಪಾಕಿಸ್ತಾನಕ್ಕೆ ತೆರಳಿತ್ತು. ಇದಕ್ಕೂ ಮುನ್ನ, 2006ರಲ್ಲಿ ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಂಡಿತ್ತು. ರಾಜೀವ್ ಶುಕ್ಲಾ ಅವರು ಬಿಸಿಸಿಐ ಚುಕ್ಕಾಣಿ ಹಿಡಿದಿದ್ದ ಸಮಯದಲ್ಲಿ ಎರಡು ದೇಶಗಳ ನಡುವೆ ಸೌಹಾರ್ಧ ಪಂದ್ಯ ನಡೆದಿತ್ತು.
ತನ್ನ ತಂಡವು ಏಶ್ಯಾಕಪ್ ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ತೆರಳುವುದನ್ನು ಬಿಸಿಸಿಐ ನಿರಾಕರಿಸಿದ್ದರಿಂದ, ಈ ಕ್ರೀಡಾಕೂಟವು ದ್ವಿರಾಷ್ಟ್ರ ಹೈಬ್ರಿಡ್ ಮಾದರಿ ವ್ಯವಸ್ಥೆಯಲ್ಲಿ ಅಂತ್ಯವಾಗಿತ್ತು. ಹೀಗಿದ್ದೂ, ಸೌಹಾರ್ದತೆಯ ಭಾಗವಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜ್ಯಪಾಲರು ಆತಿಥ್ಯ ವಹಿಸಿರುವ ಔತಣ ಕೂಟದಲ್ಲಿ ಭಾಗವಹಿಸಲು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಊಪಾಧ್ಯಕ್ಷ ರಾಜೀವ್ ಶುಕ್ಲಾ ಅವರಿಗೆ ಅನುಮತಿ ನೀಡಿದೆ.