ಇದು ಅಂತರರಾಷ್ಟ್ರೀಯ ಹಾಕಿಗೆ ನನ್ನ ಪರಿಪೂರ್ಣ ವಿದಾಯ: ಶ್ರೀಜೇಶ್

ಪಿ.ಆರ್.ಶ್ರೀಜೇಶ್ | PC : Olympics.com
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿರುವುದು ನನ್ನ ಅಂತರ್ರಾಷ್ಟ್ರೀಯ ವೃತ್ತಿಜೀವನಕ್ಕೆ ಪರಿಪೂರ್ಣ ವಿದಾಯವಾಗಿದೆ ಎಂದು ಗುರುವಾರ ಭಾರತದ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಪ್ರತಿಕ್ರಿಯಿಸಿದ್ದಾರೆ.
ಭಾರತ ತಂಡ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಸ್ಪೇನ್ ತಂಡವನ್ನು 2-1 ಅಂತರದಿಂದ ಸೋಲಿಸಿದೆ.
ಒಲಿಂಪಿಕ್ಸ್ ನಂತರ ನಿವೃತ್ತಿಯಾಗುವುದಾಗಿ ಈಗಾಗಲೇ ಪ್ರಕಟಿಸಿದ್ದ ಶ್ರೀಜೇಶ್ಗೆ ಇಡೀ ತಂಡವು ಭಾವನಾತ್ಮಕ ವಿದಾಯ ಕೋರಿತು. ಪಂದ್ಯದ ನಂತರ ಇಡೀ ತಂಡವು ಗೋಲ್ಕೀಪರ್ಗೆ ತಲೆಬಾರಿ ಗೌರವ ಸಲ್ಲಿಸಿದೆ.
ಎಲ್ಲ ಆಟಗಳನ್ನು ಮುಗಿಸಲು ಇದು ಉತ್ತಮ ಮಾರ್ಗವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಪಂದ್ಯಾವಳಿಯನ್ನು ಸುಂದರವಾಗಿಸಿದ ನನ್ನ ತಂಡ, ಹಾಕಿ ಸಿಬ್ಬಂದಿ ಹಾಗೂ ಐಒಎಗೆ ಧನ್ಯವಾದಗಳು ಎಂದು ಶ್ರೀಜೇಶ್ ಪಂದ್ಯದ ನಂತರ ಹೇಳಿದ್ದಾರೆ.
36ರ ಹರೆಯದ ಕೇರಳದ ಹಾಕಿ ಪಟು ಶ್ರೀಜೇಶ್ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ ತಂಡದ ಭಾಗವಾಗಿದ್ದರು.
ಟೋಕಿಯೊ ಒಲಿಂಪಿಕ್ಸ್ಗೆ ನನ್ನ ಪಾಲಿಗೆ ವಿಶೇಷವಾದುದು. ಅದಕ್ಕೆ ನನ್ನ ಹೃದಯದಲ್ಲಿ ವಿಭಿನ್ನ ಸ್ಥಾನವಿದೆ. ಒಲಿಂಪಿಕ್ ಗೇಮ್ಸ್ನಲ್ಲಿ ಪದಕ ಗೆಲ್ಲಬಹುದೆಂಬ ಆತ್ಮವಿಶ್ವಾಸವನ್ನು ಟೋಕಿಯೊ ಗೇಮ್ಸ್ ನಮಗೆ ನೀಡಿತ್ತು ಎಂದು ಶ್ರೀಜೇಶ್ ಹೇಳಿದ್ದಾರೆ.
ಶ್ರೀಜೇಶ್ ಸತತ ಎರಡನೇ ಒಲಿಂಪಿಕ್ಸ್ ಪದಕದೊಂದಿಗೆ 18 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಶ್ರೀಜೇಶ್ ಈ ತನಕ 2 ಒಲಿಂಪಿಕ್ಸ್ ಪದಕ, 5 ಏಶ್ಯನ್ ಗೇಮ್ಸ್(1 ಚಿನ್ನ, 1 ಬೆಳ್ಳಿ, 3 ಕಂಚು)ಪದಕ, ಎರಡು ಕಾಮನ್ವೆಲ್ತ್ ಗೇಮ್ಸ್(ಎರಡು ಬೆಳ್ಳಿ)ಪದಕ , ಎರಡು ಏಶ್ಯಕಪ್, ಎರಡು ಚಾಂಪಿಯನ್ಸ್ ಟ್ರೋಫಿಗಳನ್ನು ಜಯಿಸಿದ್ದಾರೆ.
ಸುಮಾರು 18 ವರ್ಷಗಳ ವೃತ್ತಿಜೀವನದಲ್ಲಿ ಒಟ್ಟು 336 ಪಂದ್ಯಗಳನ್ನು ಆಡಿದ್ದಾರೆ.
ಫ್ರಾನ್ಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ 13ನೇ ದಿನವಾದ ಗುರುವಾರ ಭಾರತದ ಹಾಕಿ ಪುರುಷರ ತಂಡವು ಕಂಚಿನ ಪದಕಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿ ಒಲಿಂಪಿಕ್ಸ್ ಪದಕ ಜಯಿಸಿದೆ. ಈ ಮೂಲಕ ವಿದಾಯ ಪ್ರಕಟಿಸಿರುವ ಹಿರಿಯ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ಗೆ ಗೆಲುವಿನ ಉಡುಗೊರೆ ನೀಡಲಾಗಿದೆ. ಕುಸ್ತಿಪಟು ಅಮನ್ ಸೆಹ್ರಾವತ್ ಸೆಮಿ ಫೈನಲ್ಗೆ ತಲುಪಿದ್ದು ಪದಕ ಗೆಲ್ಲುವುದರಿಂದ ಒಂದು ಹೆಜ್ಜೆ ಹಿಂದಿದ್ದಾರೆ. ಮಹಿಳೆಯರ 100 ಮೀ. ಹರ್ಡಲ್ಸ್ನ ರಿಪಿಚೇಜ್ ಸುತ್ತಿನಲ್ಲಿ ಜ್ಯೋತಿ ಯರ್ರಾಜಿ 4ನೇ ಸ್ಥಾನ ಪಡೆದಿದ್ದಾರೆ. ಪದಕದ ಭರವಸೆ ಮೂಡಿಸಿದ್ದ ಹಿರಿಯ ವೇಟ್ಲಿಫ್ಟರ್ ಮೀರಾಬಾಯಿ ಚಾನು 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.