ಆ 5 ಸಿಕ್ಸ್ ಗಳು ನನ್ನ ಬದುಕನ್ನೇ ಬದಲಿಸಿದವು: ರಿಂಕು ಸಿಂಗ್

ಹೊಸದಿಲ್ಲಿ: ರಿಂಕು ಸಿಂಗ್ ಈವರೆಗೆ ಆಡಿರುವುದು ಕೇವಲ ಎರಡು ಅಂತರ್ ರಾಷ್ಟ್ರೀಯ ಪಂದ್ಯಗಳನ್ನು. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಅವರು ಈಗಾಗಲೇ ಚಿರಪರಿಚಿತರು. ಅದಕ್ಕೆ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಆವೃತ್ತಿಯ ಪಂದ್ಯವೊಂದರಲ್ಲಿ ಅವರು ಬೆನ್ನು ಬೆನ್ನಿಗೆ ಸಿಡಿಸಿದ ಐದು ಸಿಕ್ಸ್ಗಳು.
ಕೋಲ್ಕತ ನೈಟ್ ರೈಡರ್ಸ್ ತಂಡದಲ್ಲಿ ಆಡಿರುವ ಅವರು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯವೊಂದರ ಅಂತಿಮ ಓವರ್ನಲ್ಲಿ ಐದು ಸಿಕ್ಸ್ಗಳನ್ನು ಬಾರಿಸಿ ತನ್ನ ತಂಡವನ್ನು ಅಮೋಘ ಜಯದತ್ತ ಮುನ್ನಡೆಸಿದರು.
ಆ ಕ್ಷಣಗಳನ್ನು ನೆನಪಿಸಿದ ರಿಂಕು, ಅವುಗಳು ನನ್ನ ಬದುಕನ್ನು ಶಾಶ್ವತವಾಗಿ ಬದಲಾಯಿಸಿದವು ಎಂದು ಹೇಳಿದರು. “ಆ ಐದು ಸಿಕ್ಸ್ಗಳು ನನ್ನ ಬದುಕನ್ನು ಬದಲಾಯಿಸಿದವು. ಆ ಸಿಕ್ಸರ್ಗಳಿಗಾಗಿ ಜನರು ನನ್ನನ್ನು ನೆನಪಿಸಿಕೊಳ್ಳುತ್ತಾರೆ. ಜನರು ನನ್ನ ಹೆಸರನ್ನು ಹೇಳುವಾಗ ನನಗೆ ರೋಮಾಂಚನವಾಗುತ್ತದೆ. ಅವರು ನನಗೆ ತೋರಿಸುತ್ತಿರುವ ಪ್ರೀತಿಯನ್ನು ಕಂಡು ಸಂತೋಷವಾಗುತ್ತದೆ’’ ಎಂದು ಬಿಸಿಸಿಐ.ಟಿವಿಯಲ್ಲಿ ತನ್ನ ತಂಡದ ಸಹ ಆಟಗಾರ ರವಿ ಬಿಷ್ಣೋಯ್ ಜೊತೆಗೆ ನಡೆಸಿದ ಸಂವಾದದ ವೇಳೆ ರಿಂಕು ಹೇಳಿದರು.
ಐರ್ಲ್ಯಾಂಡ್ ವಿರುದ್ಧದ ಭಾರತದ ಟಿ20 ಸರಣಿ ರಿಂಕು ಸಿಂಗ್ ರ ಮೊದಲ ಅಂತರ್ರಾಷ್ಟ್ರೀಯ ಕ್ರಿಕೆಟ್ ಸರಣಿಯಾಗಿದೆ. ಅವರು ಈವರೆಗಿನ ಎರಡೂ ಪಂದ್ಯಗಳಲ್ಲಿ ಆಡಿದ್ದಾರೆ. ಮೊದಲ ಪಂದ್ಯಕ್ಕೆ ಮಳೆ ಕಾಡಿದ್ದರಿಂದ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ. ಎರಡನೇ ಪಂದ್ಯದಲ್ಲಿ ಅವರು 180.90 ಸ್ಟ್ರೈಕ್ ರೇಟ್ನಲ್ಲಿ 38 ರನ್ಗಳನ್ನು ಗಳಿಸಿದ್ದಾರೆ.
ಕೊನೆಯವರೆಗೂ ಬ್ಯಾಟಿಂಗ್ ಮಾಡುತ್ತಾ, ಪಂದ್ಯದ ಅಂತಿಮ ಹಂತಗಳಲ್ಲಿ ದೊಡ್ಡ ಹೊಡೆತಗಳಿಗೆ ಮುಂದಾಗಲು ನಾನು ಬಯಸುತ್ತೇನೆ ಎಂದು ತನ್ನ ಶೈಲಿಯ ಬಗ್ಗೆ ಮಾತನಾಡಿದ ಅವರು ಹೇಳಿದರು.