ಕುಸ್ತಿ ಪಟು ವಿನೀಶ್ ಫೋಗಟ್ ಬಗ್ಗೆ ಮಾತನಾಡುವವರಿಗೆ ಉತ್ತರ ಸಿಕ್ಕಿದೆ : ರಾಹುಲ್ ಗಾಂಧಿ
ಹೊಸದಿಲ್ಲಿ : ವಿನೀಶ್ ಫೋಗಟ್ ಬಗ್ಗೆ ಮಾತನಾಡುವವರಿಗೆ ಉತ್ತರ ಸಿಕ್ಕಿದೆ, ಅವರ ಯಶಸ್ಸು ದಿಲ್ಲಿಗೆ ಪ್ರತಿಧ್ವನಿಸಿದೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳೆಯರ ಕುಸ್ತಿ 50 ಕೆ.ಜಿ. ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಮಂಗಳವಾರ ಕ್ಯೂಬಾದ ಯುಸ್ನೆಲಿಸ್ ಗುಝ್ಮನ್ ಲೋಪೆಝ್ ಅವರನ್ನು ಸೋಲಿಸಿ ವಿನೀಶ್ ಅವರು ಫೈನಲ್‌ಗೆ ಪ್ರವೇಶಿಸಿದ ಬೆನ್ನಲ್ಲೇ, ರಾಹುಲ್ ಗಾಂಧಿ ಅವರು ವಿನೀಶ್ ಕುರಿತು ಟೀಕೆ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷದ ನಾಯಕ ರಾಹುಲ್ ಗಾಂಧಿ, ವಿಶ್ವದ ಮೂವರು ಅಗ್ರ ಗಣ್ಯ ಕುಸ್ತಿಪಟುಗಳನ್ನು ಒಂದೇ ದಿನದಲ್ಲಿ ಸೋಲಿಸಿದ ವಿನೀಶ್ ಜೊತೆಗೆ ಇಡೀ ದೇಶವೇ ಭಾವುಕವಾಗಿದೆ. ವಿನೀಶ್ ಮತ್ತು ಅವರ ಸಹೋದ್ಯೋಗಿಗಳ ಹೋರಾಟಗಳನ್ನು ಹತ್ತಿಕ್ಕುವವರು, ಅವರ ಉದ್ದೇಶ ಮತ್ತು ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುವವರಿಗೆ ಇಂದು ಉತ್ತರಗಳು ಸಿಕ್ಕಿವೆ ಎಂದು ಹೇಳಿದ್ದಾರೆ.
“ಇಂದು ಇಡೀ ಅಧಿಕಾರ ವ್ಯವಸ್ಥೆಯೇ ಭಾರತದ ವೀರ ಪುತ್ರಿಯ ಮುಂದೆ ರಕ್ತದ ಕಣ್ಣೀರು ಸುರಿಸುವಂತೆ ಮಾಡಿದೆ. ಇದು ಚಾಂಪಿಯನ್‌ಗಳ ಗುರುತು, ಅವರು ತಮ್ಮ ಕಾರ್ಯ ಕ್ಷೇತ್ರದಿಂದ ಉತ್ತರಗಳನ್ನು ನೀಡುತ್ತಾರೆ. ವಿನೀಶ್ ಅವರಿಗೆ ಶುಭಾಶಯಗಳು. ಪ್ಯಾರಿಸ್‌ನಲ್ಲಿ ನಿಮ್ಮ ಯಶಸ್ಸಿನ ಪ್ರತಿಧ್ವನಿ ದಿಲ್ಲಿಗೆ ಸ್ಪಷ್ಟವಾಗಿ ಕೇಳಿಸಿತು” ಎಂದು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ವಿನೀಶ್ ಅವರು ಕುಸ್ತಿ ಫೆಡರೇಷನ್ ನ ಅಧ್ಯಕ್ಷ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬ್ರಿಜ್ ಭೂಷಣ ಸಿಂಗ್ ವಿರುದ್ಧ ಹೋರಾಡಿದ್ದರು. ಈ ಆರೋಪ ಮಾಡುತ್ತಿದ್ದಂತೆ ವಿನೀಶ್ ಅವರ ವಿರುದ್ಧ ಟೀಕೆ ಮಾಡಲಾಗಿತ್ತು.