ಟಿ-20 ವಿಶ್ವಕಪ್| ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಬೆದರಿಕೆ
ಭದ್ರತೆ ಒದಗಿಸುವ ಭರವಸೆ ನೀಡಿದ ಅಮೆರಿಕ
ಸಾಂದರ್ಭಿಕ ಚಿತ್ರ (PTI)
ನ್ಯೂಯಾರ್ಕ್: ನ್ಯೂಯಾರ್ಕ್ ನ ಐಶನ್ ಹೋವರ್ ಪಾರ್ಕ್ ನಲ್ಲಿ ನಿರ್ಮಿಸಲಾಗಿರುವ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್ 9ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ಟಿ-20 ವಿಶ್ವಕಪ್ ಪಂದ್ಯಕ್ಕೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಭಾರಿ ಬಿಗಿ ಭದ್ರತೆ ಒದಗಿಸಲಾಗುತ್ತದೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನ್ಯೂಯಾರ್ಕ್ ನ ಪ್ರಾಧಿಕಾರಗಳು, ಈ ವೇಳೆ ಯಾವುದೇ ಬಗೆಯ ವಿಶ್ವಸನೀಯ ಸಾರ್ವಜನಿಕ ಬೆದರಿಕೆ ಇಲ್ಲದಿದ್ದರೂ, ಯಾವುದೇ ಅಡಚನೆ ಆಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು ಎಂದು ಹೇಳಿವೆ.
ಇದೇ ಪ್ರಥಮ ಬಾರಿಗೆ ಅಮೆರಿಕಾವು ವೆಸ್ಟ್ ಇಂಡೀಸ್ ನೊಂದಿಗೆ ಟಿ-20 ವಿಶ್ವಕಪ್ ಆತಿಥ್ಯ ವಹಿಸುತ್ತಿದ್ದು, ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಒಟ್ಟು ಎಂಟು ಪಂದ್ಯಗಳು ನಡೆಯಲಿವೆ. ಈ ಪೈಕಿ ಜೂನ್ 9ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೂ ಸೇರಿದೆ.
ನ್ಯೂಯಾರ್ಕ್ ನಲ್ಲಿ ದೊಡ್ಡ ಪ್ರಮಾಣದ ಭಾರತ ಉಪ ಖಂಡದ ನಿವಾಸಿಗಳು ನೆಲೆಸಿರುವುದರಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಭಾರಿ ಸಂಖ್ಯೆಯ ಪ್ರೇಕ್ಷಕರು ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳು ಯಾವಾಗಲೂ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸುವುದರಿಂದ, ಎ ಗುಂಪಿನ ಈ ಎರಡು ತಂಡಗಳ ನಡುವಿನ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ನಡುವೆ, ಭದ್ರತಾ ಬೆದರಿಕೆಯ ಕುರಿತು ನಾವು ಪ್ರಾಧಿಕಾರಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹೇಳಿದೆ.