ಟಿ20ಯಲ್ಲಿ ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
PC: x.com/iGorilla19
ಚೆನ್ನೈ: ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಶನಿವಾರ ಎರಡು ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಗಳಿಸಿದ್ದು, ಜೋಸ್ ಬಟ್ಲರ್ ಅವರ 45 ರನ್ ಗಳ ನೆರವಿನಿಂದ ಇಂಗ್ಲೆಂಡ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಆದರೆ ಭಾರತ ಸತತವಾಗಿ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಬಂದರೂ ತಿಲಕ್ ವರ್ಮಾ (72 ನಾಟೌಟ್) ಅವರ ಅದ್ಭುತ ಬ್ಯಾಟಿಂಗ್ ನಿಂದಾಗಿ ನಾಲ್ಕು ಎಸೆತಗಳು ಇರುವಂತೆ ಗುರಿ ತಲುಪಿತು. ಈ ಅದ್ಭುತ ಪ್ರದರ್ಶನದೊಂದಿಗೆ ತಿಲಕ್ ವರ್ಮಾ, ಟಿ20 ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯವರ ಅಪರೂಪದ ದಾಖಲೆ ಮುರಿದಿದ್ದಾರೆ.
ತಿಲಕ್ ವರ್ಮಾ ನಾಲ್ಕು ಟಿ20 ಇನಿಂಗ್ಸ್ಗಳಲ್ಲಿ ಔಟ್ ಆಗದೇ 318 ರನ್ ಗಳಿಸುವ ಮೂಲಕ ಈ ದಾಖಲೆಗೆ ಭಾಜನರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 107 ಮತ್ತು 120 ರನ್ ಗಳಿಸಿದ್ದ ವರ್ಮಾ, ಇಂಗ್ಲೆಂಡ್ ವಿರುದ್ಧ ಅಜೇಯರಾಗಿ 19 ಹಾಗೂ 72 ರನ್ ಗಳಿಸಿದ್ದಾರೆ. ನಾಲ್ಕು ಟಿ20 ಇನಿಂಗ್ಸ್ ಗಳಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೊಹ್ಲಿಯವರ ದಾಖಲೆಯನ್ನು ಅವರು ಮುರಿದಿದ್ದಾರೆ. ಕೊಹ್ಲಿ ಸತತ ನಾಲ್ಕು ಇನಿಂಗ್ಸ್ ನಲ್ಲಿ 258 ರನ್ ಗಳಿಸಿದ್ದು ದಾಖಲೆಯಾಗಿತ್ತು. ಸಂಜು ಸ್ಯಾಮ್ಸನ್ 257 ರನ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕು ಸತತ ಇನಿಂಗ್ಸ್ ಗಳಲ್ಲಿ 300ಕ್ಕಿಂತ ಹೆಚ್ಚು ರನ್ ಗಳಿಸಿದ ಮೊಟ್ಟಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯ ಮಂಗಳವಾರ ರಾಜ್ಕೋಟ್ ನಲ್ಲಿ ನಡೆಯಲಿದೆ.