'ಟೈಮ್ಡ್ ಔಟ್' ಮೇಲ್ಮನವಿ ತನ್ನ ಕಲ್ಪನೆಯಲ್ಲ: ಶಕೀಬ್ ಅಲ್ ಹಸನ್
ವಿಶ್ವಕಪ್ ನಿಂದ ಹೊರ ನಡೆದ ಬಾಂಗ್ಲಾ ನಾಯಕ!
ಶಕೀಬ್ ಅಲ್ ಹಸನ್ Photo: cricketworldcup.com
ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂ ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯ ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಬಾಂಗ್ಲಾ ನಾಯಕ ತೆಗೆದುಕೊಂಡ ವಿವಾದಾತ್ಮಕ ಟೈಮ್ಡ್ – ಔಟ್ ಮನವಿ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಶಕೀಬ್ ಅದು ಮೂಲತಃ ತನ್ನ ಕಲ್ಪನೆಯಲ್ಲ ಎಂಬ ಹೇಳಿದ್ದಾರೆ.
ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಕ್ರಿಕೆಟ್ ವಿಶ್ವಕಪ್ 2023 ಪಂದ್ಯದ ವೇಳೆ ಆ್ಯಂಜೆಲೊ ಮ್ಯಾಥ್ಯೂಸ್ ಅಂತರ್ರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ 'ಟೈಮ್ ಔಟ್' ಆದ ಕ್ರಿಕೆಟಿಗ ಎನಿಸಿಕೊಂಡರು. ಸಮರವಿಕ್ರಮ ಔಟ್ ಆದ ಬಳಿಕ ಬ್ಯಾಟಿಂಗ್ ಬಂದ ಮ್ಯಾಥ್ಯೂಸ್ ಎರಡು ನಿಮಿಷಗಳ ಒಳಗಡೆ ಎಸೆತವನ್ನು ಎದುರಿಸಲು ಸಿದ್ಧರಿರಲಿಲ್ಲ. ಅವರ ಹೆಲ್ಮೆಟ್ ಮುರಿದಿತ್ತು. ಈ ಬಗ್ಗೆ ಅಂಪೈರ್ ಗಮನಕ್ಕೆ ತಂದ ಬಾಂಗ್ಲಾ ನಾಯಕ ಶಕೀಬ್ ಟೈಮ್ಡ್ – ಔಟ್ ಗೆ ಮನವಿ ಮಾಡಿದರು. ಶಕೀಬ್ ಅಲ್ ಹಸನ್ ಅವರ ಮನವಿಯ ನಂತರ ಅಂಪೈರ್, ಮ್ಯಾಥ್ಯೂಸ್ ರನ್ನು ಔಟ್ ಮಾಡುವುದನ್ನು ಬಿಟ್ಟು ಅವರ ಬಳಿ ಬೇರೆ ಆಯ್ಕೆ ಇರಲಿಲ್ಲ. ಘಟನೆಯ ನಂತರ ಈ ಬಗ್ಗೆ ಅಸಮಾಧಾನ ಹೊರಹಾಕಿದ ಮ್ಯಾಥ್ಯೂಸ್ ಬಾಂಗ್ಲಾ ತಂಡವನ್ನು ತೀವ್ರವಾಗಿ ಟೀಕಿಸಿದ್ದರು. ಅಲ್ಲದೇ ಮನವಿಗಾಗಿ ಶಕೀಬ್ ಅಲ್ ಹಸನ್, ಅಭಿಮಾನಿಗಳು ಮತ್ತು ಕ್ರಿಕೆಟಿಗರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಅದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಕೀಬ್, ಈ ಮನವಿಯು ಮೂಲತಃ ತನ್ನ ಕಲ್ಪನೆಯಲ್ಲ ಎಂದು ಪಂದ್ಯದ ನಂತರ ಬಹಿರಂಗಪಡಿಸಿದರು.
“ ನಮ್ಮ ಫೀಲ್ಡರ್ ಒಬ್ಬರು ನನ್ನ ಬಳಿಗೆ ಬಂದು ನಾನು ಮೇಲ್ಮನವಿ ಸಲ್ಲಿಸಿದರೆ ಅವರು ಔಟ್ ಆಗುತ್ತಾರೆ ಎಂದು ಹೇಳಿದರು. ಈ ಬಗ್ಗೆ ಅಂಪೈರ್ ಬಳಿ ಕೇಳಿದಾಗ, ಇದು ಕಾನೂನಿನಲ್ಲಿ ಇದೆ, ನೀವು ಆ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೀರಾ? ಎಂದು ನನ್ನನ್ನು ಕೇಳಿದರು. ಬಳಿಕ ಕ್ರಿಕೆಟ್ ನಿಯಮಗಳ ಪ್ರಕಾರ ಆ್ಯಂಜೆಲೊ ಔಟ್ ಆದರು. ಅದು ಸರಿಯೋ ತಪ್ಪೋ ಎಂದು ನನಗೆ ತಿಳಿದಿಲ್ಲ. ಒಟ್ಟಿನಲ್ಲಿ ನಾವು ಪಂದ್ಯ ದಲ್ಲಿ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ಚರ್ಚೆಗಳು ನಡೆಯುತ್ತವೆ ಎಂದು ಶಕೀಬ್ ಪ್ರತಿಕ್ರಿಯಿಸಿದ್ದಾರೆ.
ವಿಶ್ವಕಪ್ ನಿಂದ ಹೊರನಡೆದ ಶಕೀಬ್ :
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಶಕೀಬ್ ವಿಶ್ವಕಪ್ ನಿಂದ ಹೊರ ನಡೆದಿದ್ದಾರೆ. ಬಾಂಗ್ಲಾದೇಶದ ನಾಯಕ ವಿಶ್ವಕಪ್ ಟೂರ್ನಿಯಲ್ಲಿ ನ.11 ರಂದು ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಬೇಕಿತ್ತು. ಎಡಗೈ ತೋರು ಬೆರಳಿನ ಮೂಳೆ ಮುರಿತದಿಂದಾಗಿ ತಂಡದಿಂದ ಹೊರಗುಳಿಯುವುದಾಗಿ ಅವರು ತಂಡದ ಫಿಸಿಯೋ ಗೇ ತಿಳಿದ್ದಾರೆ.
ಶಕೀಬ್ ಮಂಗಳವಾರ ಢಾಕಾಗೆ ವಾಪಸಾಗಲಿದ್ದಾರೆ. ಅವರನ್ನು ಹೊರತುಪಡಿಸಿದ ತಂಡ ದಿಲ್ಲಿಯಿಂದ ಪುಣೆಗೆ ಪ್ರಯಾಣ ಬೆಳೆಸಲಿದೆ. ಶಕೀಬ್ ಬದಲಿಗೆ ಬ್ಯಾಟರ್ ಅನಾಮುಲ್ ಹಕ್ ತಂಡ ಸೇರಿಕೊಳ್ಳಲಿದ್ದಾರೆ.
ಸೋಮವಾರ ದಿಲ್ಲಿಯಲ್ಲಿ ಶ್ರೀಲಂಕಾ ವಿರುದ್ಧದ ಶಕೀಬ್ ಅಲ್ ಹಸನ್ ಗಾಯಗೊಂಡಿದ್ದರು.