ನಾಳೆ ಮೊದಲ ಕ್ವಾಲಿಫೈಯರ್ ಪಂದ್ಯ | ಕೆಕೆಆರ್-ಎಸ್ಆರ್ಎಚ್ ಕಾದಾಟ, ಫೈನಲ್ ನತ್ತ ಚಿತ್ತ
PC : PTI
ಅಹ್ಮದಾಬಾದ್: ಈ ವರ್ಷದ ಐಪಿಎಲ್ ನಲ್ಲಿ ಬ್ಯಾಟಿಂಗ್ ಪರಾಕ್ರಮದಿಂದ ಮಿಂಚಿರುವ ತಂಡಗಳಾದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮಂಗಳವಾರ ನಡೆಯುವ ಐಪಿಎಲ್ ನ ಮೊದಲ ಕ್ವಾಲಿಫೈಯರ್ ನಲ್ಲಿ ಕಾದಾಡಲಿವೆ. ಉಭಯ ತಂಡಗಳ ನಡುವಿನ ಪಂದ್ಯದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ.
ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡ ನೇರವಾಗಿ ಫೈನಲ್ ಗೆ ಪ್ರವೇಶಿಸಲಿದೆ. ಸೋತ ತಂಡ ಮತ್ತೊಂದು ಅವಕಾಶವನ್ನು ಪಡೆಯಲಿದ್ದು, ಕ್ವಾಲಿಫೈಯರ್-2ರಲ್ಲಿ ಆಡಲಿದೆ.
ಕಳೆದ ವಾರ ಅಹ್ಮದಾಬಾದ್ ಸಹಿತ ಮೂರು ಐಪಿಎಲ್ ಪಂದ್ಯಗಳು ಮಳೆಗಾಹುತಿಯಾಗಿವೆ. ಮಂಗಳವಾರ ಮಳೆ ಬಾರದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಫಲಿತಾಂಶ ಬಾರದಿದ್ದರೆ ಯಾವ ತಂಡ ಫೈನಲ್ ಗೆ ಪ್ರವೇಶಿಸುತ್ತದೆ?ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಮೇ 22ರಂದು ರಾಜಸ್ಥಾನ ಹಾಗೂ ಆರ್ಸಿಬಿ ನಡುವೆ ಎಲಿಮಿನೇಟರ್ ಪಂದ್ಯವು ಅಹ್ಮದಾಬಾದ್ ನಲ್ಲೇ ನಡೆಯುತ್ತದೆ. ಪ್ಲೇ ಆಫ್ ಪಂದ್ಯಗಳಿಗೆ ಮೀಸಲು ದಿನಗಳಿಲ್ಲ. 2023ರ ಐಪಿಎಲ್ ಫೈನಲ್ ಪಂದ್ಯವು ಪ್ರತಿಕೂಲ ಹವಾಮಾನದಿಂದಾಗಿ ಮೂರು ದಿನಗಳ ಕಾಲ ನಡೆದಿತ್ತು.
ಕೆಕೆಆರ್-ಹೈದರಾಬಾದ್ ಪಂದ್ಯ ಮಳೆಗಾಹುತಿಯಾದರೆ, ಫೈನಲ್ ಗೆ ಯಾರು?
ಕೆಕೆಆರ್ ಹಾಗೂ ಸನ್ರೈಸರ್ಸ್ ತಂಡಗಳ ಕ್ವಾಲಿಫೈಯರ್-1 ಪಂದ್ಯ ಮಳೆಗಾಹುತಿಯಾದರೆ, ನಿಗದಿತ ಸಮಯ ಹಾಗೂ ಹೆಚ್ಚುವರಿ ಸಮಯ(ಸೂಪರ್ ಓವರ್)ದಲ್ಲಿ ಫಲಿತಾಂಶ ಬಾರದಿದ್ದರೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ತಂಡ ಫೈನಲ್ ಗೆ ಪ್ರವೇಶಿಸುತ್ತದೆ. ಪ್ರಸಕ್ತ ಐಪಿಎಲ್ ನಲ್ಲಿ ಕೆಕೆಆರ್ ಲೀಗ್ ಹಂತದಲ್ಲಿ ಅಗ್ರ ಸ್ಥಾನಿಯಾಗಿದ್ದು ಅದು ಫೈನಲ್ ಗೆ ಪ್ರವೇಶಿಸಲಿದೆ. ಸನ್ರೈಸರ್ಸ್ ಎರಡನೇ ಕ್ವಾಲಿಫೈಯರ್ ಆಡಲು ಚೆನ್ನೈಗೆ ಪ್ರಯಾಣಿಸುತ್ತದೆ.
ಹೇಗಿದೆ ಕೆಕೆಆರ್ ತಂಡ?
ಫಿಲ್ ಸಾಲ್ಟ್ ಐಪಿಎಲ್ ತೊರೆದಿದ್ದರೂ ಕೆಕೆಆರ್ ತಂಡದಲ್ಲಿ ಸುನೀಲ್ ನರೇನ್, ಆಂಡ್ರೆ ರಸೆಲ್ ಹಾಗೂ ರಿಂಕು ಸಿಂಗ್ ರಂತಹ ಹೊಡಿಬಡಿ ಆಟಗಾರರಿದ್ದಾರೆ. ಸನ್ರೈಸರ್ಸ್ ನ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಹಾಗೂ ಹೆನ್ರಿಕ್ ಕ್ಲಾಸೆನ್ ಕೆಕೆಆರ್ ಗೆ ನಿಶ್ಚಿತವಾಗಿ ಪೈಪೋಟಿ ನೀಡಬಲ್ಲರು.
ಸನ್ರೈಸರ್ಸ್ನ 3ನೇ ಕ್ರಮಾಂಕದಲ್ಲಿ ಆಕ್ರಮಣಕಾರಿಆಟಗಾರ ರಾಹುಲ್ ತ್ರಿಪಾಠಿ ಇದ್ದಾರೆ. ಇವರು ಅಗ್ರ ಸರದಿಯನ್ನು ಬಲಿಷ್ಠಗೊಳಿಸಿದ್ದಾರೆ.
ಕಳೆದ ಎರಡು ಲೀಗ್ ಪಂದ್ಯಗಳು ಮಳೆಗಾಹುತಿಯಾದ ಕಾರಣ ಕೆಕೆಆರ್ ತಂಡ ಅಂಕವನ್ನು ಹಂಚಿಕೊಂಡಿತ್ತು. ಕೆಕೆಆರ್ ಮೇ 11ರಂದು ಕೋಲ್ಕತಾದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಪ್ಲೇ ಆಫ್ ಸ್ಥಾನ ಖಚಿತಪಡಿಸಿತ್ತು. ಆ ನಂತರ ಪಂದ್ಯವನ್ನೇ ಆಡಿಲ್ಲ. ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಎದುರು ಆಡಬೇಕಾಗಿದ್ದ ಪಂದ್ಯ ಭಾರೀ ಮಳೆಯಿಂದಾಗಿ ರದ್ದಾಗಿತ್ತು. 10 ದಿನಗಳ ವಿರಾಮದ ನಂತರ ಅಂಕಪಟ್ಟಿಯ ಅಗ್ರ ಸ್ಥಾನಿ ಕೆಕೆಆರ್ ಮೈದಾನಕ್ಕೆ ಇಳಿಯುತ್ತಿದೆ.
ಉಭಯ ತಂಡಗಳು ಮಾರ್ಚ್ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಆಗ ಕೆಕೆಆರ್ 4 ರನ್ನಿಂದ ರೋಚಕ ಜಯ ಸಾಧಿಸಿತ್ತು. ಫಿಲ್ ಸಾಲ್ಟ್(54 ರನ್) ಹಾಗೂ ಆಂಡ್ರೆ ರಸೆಲ್(64 ರನ್)ನೆರವಿನಿಂದ ಕೆಕೆಆರ್ 7 ವಿಕೆಟ್ಗೆ 208 ರನ್ ಗಳಿಸಿತ್ತು. ಉತ್ತಮ ಪ್ರದರ್ಶನ ನೀಡಿದ್ದ ಕೆಕೆಆರ್ ಬೌಲರ್ ಗಳು ಸನ್ರೈಸರ್ಸ್ ತಂಡವನ್ನು 7 ವಿಕೆಟ್ಗೆ 204 ರನ್ಗೆ ನಿಯಂತ್ರಿಸಿದ್ದರು.
ಆಗ ಆಸ್ಟ್ರೇಲಿಯದ ಆಟಗಾರ ಟ್ರಾವಿಸ್ ಹೆಡ್ ಬದಲಿಗೆ ಮಾರ್ಕೊ ಜಾನ್ಸನ್ ಅವಕಾಶ ಪಡೆದಿದ್ದರು. ಕೊನೆಯ ಓವರ್ನಲ್ಲಿ ಕ್ಲಾಸೆನ್ಗೆ (63 ರನ್, 29 ಎಸೆತ) ಕಡಿವಾಣ ಹಾಕಿದ್ದ ಹರ್ಷಿತ್ ರಾಣಾ(3-33) ಈಡನ್ಗಾರ್ಡನ್ಸ್ನಲ್ಲಿ ಕೆಕೆಆರ್ಗೆ 4 ರನ್ ರೋಚಕ ಜಯ ತಂದುಕೊಟ್ಟಿದ್ದರು.
ಸನ್ರೈಸರ್ಸ್ ಈ ಋತುವಿನಲ್ಲಿ ಅಹ್ಮದಾಬಾದ್ ನಲ್ಲಿ ಆಡಿದ್ದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 7 ವಿಕೆಟ್ನಿಂದ ಸೋತಿತ್ತು. ಕೋಲ್ಕತಾ ಹಾಗೂ ಗುಜರಾತ್ ನಡುವಿನ ಪಂದ್ಯ ಮಳೆಗಾಹುತಿಯಾಗಿತ್ತು. ಸನ್ರೈಸರ್ಸ್ ತಂಡ ಕೆಕೆಆರ್ ವಿರುದ್ಧ ಐಪಿಎಲ್ ಪ್ಲೇ- ಆಫ್ ಪಂದ್ಯವನ್ನ್ನು ಸೋತಿಲ್ಲ. ಈ ಹಿಂದಿನ ಎಲ್ಲ 3 ಪಂದ್ಯಗಳಲ್ಲಿ ಜಯಶಾಲಿಯಾಗಿತ್ತು.
ಪವರ್ ಪ್ಲೇನಲ್ಲಿ ಹೈದರಾಬಾದ್ ಪ್ರಾಬಲ್ಯ:
ಅಭಿಷೇಕ್ ಹಾಗೂ ಹೆಡ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಈ ವರ್ಷದ ಐಪಿಎಲ್ ನಲ್ಲಿ ಸನ್ರೈಸರ್ಸ್ ತಂಡ ಪವರ್ ಪ್ಲೇನಲ್ಲಿ ಪ್ರಾಬಲ್ಯ ಸಾಧಿಸಿದೆ. 185ರ ಸ್ಟ್ರೈಕ್ರೇಟ್ ನಲ್ಲಿ 13 ಇನಿಂಗ್ಸ್ ಗಳಲ್ಲಿ ಒಟ್ಟು 920 ರನ್ ಗಳಿಸಿದ್ದಾರೆ. ಸನ್ರೈಸರ್ಸ್ ಮೊದಲ 6 ಓವರ್ ಗಳಲ್ಲಿ ಒಟ್ಟು 55 ಸಿಕ್ಸರ್ ಸಿಡಿಸಿದೆ. ಅಭಿಷೇಕ್ ಒಬ್ಬರೇ 28 ಸಿಕ್ಸರ್ ಸಿಡಿಸಿದ್ದಾರೆ. ಯುವ ಆಟಗಾರ ಅಭಿಷೇಕ್ ಶರ್ಮಾ ಪಂಜಾಬ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಒಟ್ಟು 40 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.
ಅಂಕಿ-ಅಂಶ
► ಭುವನೇಶ್ವರ ಕುಮಾರ್ ಅವರು ಸುನೀಲ್ ನರೇನ್ರನ್ನು ಐಪಿಎಲ್ ನಲ್ಲಿ ಎರಡು ಬಾರಿ ಔಟ್ ಮಾಡಿದ್ದಾರೆ.
► 2023ರ ಋತು ಆರಂಭವಾದ ನಂತರ ವರುಣ್ ಚಕ್ರವರ್ತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಆಗಿದ್ದಾರೆ. ವರುಣ್ 26 ಐಪಿಎಲ್ ಇನಿಂಗ್ಸ್ ಗಳಲ್ಲಿ 38 ವಿಕೆಟ್ ಗಳನ್ನು ಪಡೆದಿದ್ದಾರೆ.
► ಐಪಿಎಲ್ ನಲ್ಲಿ 100 ಸಿಕ್ಸರ್ ಪೂರೈಸಲು ನರೇನ್ಗೆ 4 ಸಿಕ್ಸರ್ ಅಗತ್ಯವಿದೆ. ಈ ಋತುವಿನಲ್ಲಿ 32 ಸಿಕ್ಸರ್ ಸಿಡಿಸಿದ್ದಾರೆ. ನರೇನ್ ಎದುರಾಳಿ ಅಭಿಷೇಕ್ ಪ್ರಸಕ್ತ ಐಪಿಎಲ್ ನಲ್ಲಿ ಒಟ್ಟು 41 ಸಿಕ್ಸರ್ ಸಿಡಿಸಿ ಸಿಕ್ಸರ್ ಸರದಾರನಾಗಿದ್ದಾರೆ.
► ಭುವನೇಶ್ವರ ಕುಮಾರ್ ಪ್ರಸಕ್ತ ಐಪಿಎಲ್ ನಲ್ಲಿ 31 ಯಾರ್ಕರ್ ಗಳನ್ನು ಎಸೆದಿದ್ದಾರೆ. ಈ ಋತುವಿನಲ್ಲಿ ಜಸ್ಪ್ರೀತ್ ಬುಮ್ರಾ ಮಾತ್ರ(56) ಹೆಚ್ಚು ಯಾರ್ಕರ್ ಎಸೆದಿದ್ದಾರೆ.
ಪಿಚ್ ಹಾಗೂ ವಾತಾವರಣ
ಅಹ್ಮದಾಬಾದ್ ನ ಪಿಚ್ ಕೆಂಪು ಮಣ್ಣಿನದ್ದೋ, ಕಪ್ಪು ಮಣ್ಣಿನದ್ದೋ ಎಂಬ ಪ್ರಶ್ನೆಗೆ ಉತ್ತರ ತಂಡಗಳ ಸಂಯೋಜನೆಯಲ್ಲಿ ದೃಢಪಡಲಿದೆ. ಅಹ್ಮದಾಬಾದ್ ನಲ್ಲಿ ಈ ಹಿಂದಿನ ಪಂದ್ಯ ಮಳೆಗಾಹುತಿಯಾಗಿತ್ತು. ಆದರೆ ಮಂಗಳವಾರ ಹವಾಗುಣ ಉತ್ತಮವಾಗಿರುವ ನಿರೀಕ್ಷೆ ಇದೆ.