ನಾಳೆ ಮೊದಲ ಟ್ವೆಂಟಿ-20 ಪಂದ್ಯ: ಭಾರತ-ಆಸ್ಟ್ರೇಲಿಯ ಮುಖಾಮುಖಿ
ಸೂರ್ಯಕುಮಾರ್ ನೇತೃತ್ವದ ಯುವ ತಂಡಕ್ಕೆ ಕಠಿಣ ಸವಾಲು
Photo- PTI
ವಿಶಾಖಪಟ್ಟಣ: ಬಲಿಷ್ಠ ಆಸ್ಟ್ರೇಲಿಯ ತಂಡದ ವಿರುದ್ಧ ಗುರುವಾರದಿಂದ ಆರಂಭವಾಗಲಿರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಉದಯೋನ್ಮುಖ ಸ್ಟಾರ್ಗಳನ್ನು ಹೊಂದಿರುವ ಆಟಗಾರರ ಗುಂಪನ್ನು ಮುನ್ನಡೆಸುವ ಕಠಿಣ ಸವಾಲು ಎದುರಿಸುತ್ತಿದ್ದಾರೆ.
ವಿಶ್ವಕಪ್ ಫೈನಲ್ನಲ್ಲಿ ಭಾರತಕ್ಕೆ ಆಗಿರುವ ಆಘಾತಕಾರಿ ಸೋಲಿನ ಗಾಯ ವಾಸಿಯಾಗುವ ಮೊದಲೇ ಮತ್ತೊಂದು ಸರಣಿ ಎದುರಾಗಿದೆ.
ವಿಶ್ವಕಪ್ ಹಾಗೂ ಟಿ-20 ಸರಣಿಗೆ ಕೆಲವೇ ದಿನಗಳಿದ್ದ ಕಾರಣ ಸೂರ್ಯಕುಮಾರ್ಗೆ ತಯಾರಿ ನಡೆಸಲು ಅಲ್ಪ ಸಮಯ ಲಭಿಸಿದೆ. ನಾಯಕನಾಗಿ ಸರಣಿಯನ್ನು ಗೆಲ್ಲುವುದು ಮಾತ್ರವಲ್ಲ ಮುಂದಿನ ವರ್ಷ ಅಮೆರಿಕ ಹಾಗೂ ವೆಸ್ಟ್ಇಂಡೀಸ್ನಲ್ಲಿ ನಡೆಯುವ ಐಸಿಸಿ ಟಿ-20 ವಿಶ್ವಕಪ್ಗಿಂತ ಮೊದಲು ಭಾರತದ ಯುವ ಪ್ರತಿಭೆಗಳ ಸಾಮರ್ಥ್ಯ ಹೊರಹಾಕುವ ಗುರಿಯನ್ನು ಹೊಂದಿದ್ದಾರೆ.
ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ ಹಾಗೂ ಮುಕೇಶ್ ಕುಮಾರ್ ಅವರಂತಹ ಆಟಗಾರರು ಇತ್ತೀಚೆಗೆ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿದ್ದಾರೆ. ಭಾರತಕ್ಕೆ ವಿಶ್ವಕಪ್ ಹೀರೋಗಳಾದ ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್ವೆಲ್, ಆಡಮ್ ಝಂಪಾ ಹಾಗೂ ಮಾಜಿ ನಾಯಕ ಸ್ಟೀವನ್ ಸ್ಮಿತ್ರನ್ನು ಒಳಗೊಂಡ ಆಸ್ಟ್ರೇಲಿಯ ಟಿ-20 ತಂಡದ ಎದುರು ಸತ್ವ ಪರೀಕ್ಷೆ ಎದುರಾಗಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಈ ಸರಣಿಯು 2024ರ ಟಿ-20 ವಿಶ್ವಕಪ್ಗೆ ಹೊಸ ಆಟಗಾರರಿಗೆ ಸುವರ್ಣಾವಕಾಶವಾಗಿದೆ.
ಪ್ರಮುಖ ವೇಗಿಗಳ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯದ ಟಿ-20 ತಂಡವನ್ನು ಮ್ಯಾಥ್ಯೂ ವೇಡ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಭಾರತದ ಯುವ ಆಟಗಾರರು ಕೇನ್ ರಿಚರ್ಡ್ಸನ್, ನಥಾನ್ ಎಲ್ಲಿಸ್, ಸೀನ್ ಅಬಾಟ್ ಹಾಗೂ ಜೇಸನ್ ಬೆಹ್ರೆನ್ಡಾರ್ಫ್ರನ್ನು ಒಳಗೊಂಡ ಆಸ್ಟ್ರೇಲಿಯದ ವೇಗದ ದಾಳಿಯನ್ನು ಎದುರಿಸಬೇಕಾಗಿದೆ. ಐಪಿಎಲ್ಗಿಂತ ಮೊದಲು ಮುಂದಿನ 2 ತಿಂಗಳಲ್ಲಿ 11 ಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳು ನಡೆಯಲಿದ್ದು, ಟಿ-20 ವಿಶ್ವಕಪ್ನಲ್ಲಿ ಸ್ಥಾನ ಪಡೆಯಲು ಈ ಆಟಗಾರರಿಗೆ ಪ್ರಸಕ್ತ ಸರಣಿಯು ಅತ್ಯಂತ ಮುಖ್ಯವಾಗಿದೆ.
ಬಲ-ಎಡ ಸಂಯೋಜನೆಯನ್ನು ಗಮನದಲ್ಲಿಟ್ಟುಕೊಂಡು ಋತುರಾಜ್ ಗಾಯಕ್ವಾಡ್, ಜೈಸ್ವಾಲ್ ಅಥವಾ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂಯಕುಮಾರ್ 3 ಇಲ್ಲವೇ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು.
ಭಾರತದ ಏಕದಿನ ತಂಡಕ್ಕೆ ವ್ಯತಿರಿಕ್ತವಾಗಿ ಟಿ-20 ತಂಡದಲ್ಲಿ ಜೈಸ್ವಾಲ್, ಕಿಶನ್, ತಿಲಕ್ ವರ್ಮಾ, ರಿಂಕು ಸಿಂಗ್ ಹಾಗು ಆಲ್ರೌಂಡರ್ಗಳಾದ ಅಕ್ಷರ್ ಪಟೇಲ್, ಶಿವಂ ದುಬೆ ಹಾಗೂ ವಾಶಿಂಗ್ಟನ್ ಸುಂದರ್ ಸಹಿತ 7 ಎಡಗೈ ಬ್ಯಾಟರ್ಗಳಿದ್ದಾರೆ.
ಈ ಸರಣಿಯು ಭಾರತದ ಬೌಲರ್ಗಳಿಗೆ ಒಂದು ಸವಾಲಾಗಿದೆ. ಯಜುವೇಂದ್ರ ಚಹಾಲ್ ಅನುಪಸ್ಥಿತಿಯಲ್ಲಿ ರವಿ ಬಿಷ್ಣೋಯ್ಗೆ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಪ್ರಸಿದ್ಧ ಕೃಷ್ಣ, ಅವೇಶ್ ಖಾನ್, ಮುಕೇಶ್ ಕುಮಾರ್ ಹಾಗೂ ಅರ್ಷದೀಪ್ ಸಿಂಗ್ ಭಾರತದ ವೇಗದ ಬೌಲಿಂಗ್ನಲ್ಲಿದ್ದಾರೆ. ಅಕ್ಷರ್ ಪಟೇಲ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿದ್ದಾರೆ.
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್(ನಾಯಕ), ಋತುರಾಜ್ ಗಾಯಕ್ವಾಡ್(ಉಪ ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ(ವಿಕೆಟ್ಕೀಪರ್), ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಅವೇಶ್ ಖಾನ್, ಮುಕೇಶ್ ಕುಮಾರ್.
ಆಸ್ಟ್ರೇಲಿಯ: ಮ್ಯಾಥ್ಯೂಸ್ ವೇಡ್(ನಾಯಕ) ಆ್ಯರೊನ್ ಹಾರ್ಡಿ, ಜೇಸನ್ ಬೆಹ್ರೆನ್ಡಾರ್ಫ್, ಸೀನ್ ಅಬಾಟ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್ವೆಲ್, ತನ್ವೀರ್ ಸಾಂಘಾ, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೋನಿಸ್, ಕೇನ್ ರಿಚರ್ಡ್ಸನ್, ಆಡಮ್ ಝಂಪಾ.
ಪಂದ್ಯ ಆರಂಭದ ಸಮಯ: ರಾತ್ರಿ 7:00
ಅಂತಿಮ 11ರಲ್ಲಿ ಸ್ಥಾನ ಪಡೆಯುವರು ಯಾರು?
ಭಾರತದ ಆಡುವ 11ರ ಬಳಗವು ಸಂಪೂರ್ಣ ರಹಸ್ಯವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಹಲವು ಕಾಂಬಿನೇಶನ್ನಲ್ಲಿ ಆಡಲಾಗಿತ್ತು. ಸೂರ್ಯಕುಮಾರ್ 3ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ. ಇಶಾನ್ ಕಿಶನ್ ವಿಕೆಟ್ಕೀಪಿಂಗ್ ಮಾಡಲಿದ್ದು, ಅದರೆ ಅವರು ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆಂದು ಸ್ಪಷ್ಟವಾಗಿಲ್ಲ. ಅಕ್ಷರ್ ಪಟೇಲ್ ತಂಡಕ್ಕೆ ವಾಪಸಾಗಲು ಸಜ್ಜಾಗಿದ್ದಾರೆ.
ಆಸ್ಟ್ರೇಲಿಯವು ಸಮಚಿತ್ತದ ಕ್ರಿಕೆಟಿಗರತ್ತ ಚಿತ್ತಹರಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಯಲ್ಲಿ ಸ್ಟೀವನ್ ಸ್ಮಿತ್ ಆರಂಭಿಕ ಆಟಗಾರನಾಗಿ ಆಡಿದ್ದರು. ಆ ನಂತರ ಗಾಯಗೊಂಡಿದ್ದರು. ವಿಶ್ವಕಪ್ ಸೆಮಿ ಫೈನಲ್ ಹಾಗೂ ಫೈನಲ್ನಲ್ಲಿ ಆಡದ ಮಾರ್ಕಸ್ ಸ್ಟೋನಿಸ್ ಹಾಗೂ ಸೀನ್ ಅಬಾಟ್ ಆಡುವ ಬಳಗ ಸೇರುವ ಸಾಧ್ಯತೆಯಿದೆ. ಝಂಪಾಗೆ ವಿಶ್ರಾಂತಿ ನೀಡಿ ತನ್ವೀರ್ ಸಾಂಘಾಗೆ ಅವಕಾಶ ನೀಡಬಹುದು.
ಪಿಚ್ ಹಾಗು ವಾತಾವರಣ
ವಾತಾವರಣ ತೇವಾಂಶದಿಂದ ಕೂಡಿದ್ದು ಮಧ್ಯಾಹ್ನದ ಹೊತ್ತಿಗೆ ಒಂದೆರಡು ತುಂತುರು ಮಳೆಯಗುವ ಸಂಭವವಿದೆ. ಈ ಎರಡೂ ತಂಡಗಳು ಮಾರ್ಚ್ನಲ್ಲಿ ಇದೇ ಮೈದಾನದಲ್ಲಿ ಮುಖಾಮುಖಿಯಾದಾಗ ಇದೇ ರೀತಿಯ ವಾತಾವರಣ ಇತ್ತು. ಆಸ್ಟ್ರೇಲಿಯ ವೇಗಿಗಳು ತಮ್ಮ ತಂಡಕ್ಕೆ 10 ವಿಕೆಟ್ ಗೆಲುವು ತಂದುಕೊಟ್ಟಿದ್ದರು. ಇದೇ ಮೈದಾನದಲ್ಲಿ ಆಸ್ಟ್ರೇಲಿಯವು 2019ರಲ್ಲಿ ನಡೆದಿದ್ದ ಕಡಿಮೆ ಮೊತ್ತದ ಟಿ-20 ಪಂದ್ಯವನ್ನು ಜಯಿಸಿತ್ತು. ಈ ಮೈದಾನದಲ್ಲಿ ಆಡಿರುವ 3 ಟಿ-20 ಪಂದ್ಯಗಳಲ್ಲಿ ಬೌಲರ್ಗಳು ಪ್ರಾಬಲ್ಯ ಸಾಧಿಸಿದ್ದರು.
ಅಂಕಿ-ಅಂಶ
► ಆಸ್ಟ್ರೇಲಿಯ ತಂಡ ವಿಶಾಖಪಟ್ಟಣದ ಎರಡು ಮೈದಾನಗಳಲ್ಲಿ 4 ಏಕದಿನ ಹಾಗೂ ಒಂದು ಟಿ-20 ಸಹಿತ ಐದು ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಕೇವಲ ಒಂದು ಬಾರಿ ಸೋಲುಂಡಿದೆ.
► 2021ರ ನಂತರ ಸೂರ್ಯಕುಮಾರ್ ಯಾದವ್ ಭಾರತದ ಟಿ-20 ತಂಡದ ನಾಯಕತ್ವವಹಿಸಿದ 9ನೇ ಆಟಗಾರನಾಗಿದ್ದ್ದಾರೆ. ಈ ವರ್ಷ ಹಾರ್ದಿಕ್ ಪಾಂಡ್ಯ, ಜಸ್ಟ್ರೀತ್ ಬುಮ್ರಾ ಹಾಗೂ ಋತುರಾಜ್ ಗಾಯಕ್ವಾಡ್ ಭಾರತದ ನಾಯಕತ್ವವಹಿಸಿದ್ದರು.
► ಮ್ಯಾಥ್ಯೂ ವೇಡ್ ಈ ಹಿಂದೆ ಏಳು ಟಿ-20 ಪಂದ್ಯಗಳಲ್ಲಿ ಆಸ್ಟ್ರೇಲಿಯದ ನಾಯಕತ್ವ ವಹಿಸಿದ್ದರು. ಆ್ಯರೊನ್ ಫಿಂಚ್ ಗಾಯಗೊಂಡ ಹಿನ್ನೆಲೆಯಲ್ಲಿ 2022ರ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯ ತಂಡದ ನಾಯಕನಾಗಿದ್ದರು.