ನಾಳೆ ಟಿ20 ವಿಶ್ವಕಪ್ ಫೈನಲ್ | ಪ್ರಶಸ್ತಿಗಾಗಿ ಭಾರತ-ದಕ್ಷಿಣ ಆಫ್ರಿಕಾ ಹೋರಾಟ
ರೋಹಿತ್ ಬಳಗಕ್ಕೆ ಎರಡನೇ ಪ್ರಶಸ್ತಿಯ ಕನಸು ; ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿ ಹರಿಣ ಪಡೆ
PC : X
ಬಾರ್ಬಡೋಸ್ : ಅಮೆರಿಕ ಹಾಗೂ ವೆಸ್ಟ್ಇಂಡೀಸ್ನ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ಕ್ಲೈಮ್ಯಾಕ್ಸ್ ಹಂತ ತಲುಪಿದ್ದು ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಶನಿವಾರ ನಡೆಯಲಿರುವ ಫೈನಲ್ ನಲ್ಲಿ ಪ್ರಶಸ್ತಿಗಾಗಿ ಹೋರಾಡಲಿವೆ.
2007ರ ಮೊದಲ ಆವೃತ್ತಿಯ ವಿಶ್ವಕಪ್ ನಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡ ಇದೀಗ 17 ವರ್ಷಗಳ ಬಳಿಕ ಎರಡನೇ ಬಾರಿ ಚುಟುಕು ಮಾದರಿ ಕ್ರಿಕೆಟ್ನಲ್ಲಿ ಚಾಂಪಿಯನ್ಪಟ್ಟಕ್ಕೇರುವ ವಿಶ್ವಾಸದಲ್ಲಿದೆ. ಏಕದಿನ ಹಾಗೂ ಟಿ20 ವಿಶ್ವಕಪ್ ನಲ್ಲಿ ಏಳು ಬಾರಿ ಸೆಮಿ ಫೈನಲ್ ನಲ್ಲಿ ಸೋಲನುಭವಿಸಿ ಚೋಕರ್ಸ್ ಹಣೆಪಟ್ಟಿ ಹೊಂದಿದ್ದ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿ ಫೈನಲ್ ನಲ್ಲಿ ಸ್ಪರ್ಧಿಸುತ್ತಿದ್ದು ಚೊಚ್ಚಲ ಪ್ರಶಸ್ತಿಯ ಕನಸು ಕಾಣುತ್ತಿದೆ.
28,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಕೆನ್ಸಿಂಗ್ಟನ್ ಓವಲ್ ವೆಸ್ಟ್ಇಂಡೀಸ್ನ ಅತಿ ದೊಡ್ಡ ಕ್ರೀಡಾಂಗಣವಾಗಿದೆ. 2007ರ ಏಕದಿನ ವಿಶ್ವಕಪ್ ವೇಳೆ ಮೈದಾನವನ್ನು ನವೀಕರಿಸಲಾಗಿದ್ದು ಇದೇ ಮೈದಾನದಲ್ಲಿ 2010ರಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯವನ್ನು ಸೋಲಿಸಿ ಚಾಂಪಿಯನ್ ಆಗಿತ್ತು.
ಭಾರತ ಹಾಗೂ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿ ಐಸಿಸಿ ಟೂರ್ನಮೆಂಟ್ ಫೈನಲ್ ನಲ್ಲಿ ಸೆಣಸಾಡುತ್ತಿವೆ. ಉಭಯ ತಂಡಗಳು 2014ರ ಟಿ20 ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದು, ಭಾರತ ಜಯ ಸಾಧಿಸಿತ್ತು.
ಗ್ರೂಪ್ ಹಂತದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕ್ರಮವಾಗಿ ಎ ಹಾಗೂ ಡಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದ್ದವು. ದಕ್ಷಿಣ ಆಫ್ರಿಕಾ ತಂಡ ಭಾರತಕ್ಕಿಂತ ಒಂದು ಪಂದ್ಯ ಹೆಚ್ಚು ಗೆದ್ದುಕೊಂಡಿದೆ.
ಪ್ರಸಕ್ತ ಟೂರ್ನಿಯ ಗ್ರೂಪ್ ಹಂತದಲ್ಲಿ ಭಾರತವು ಕೆನಡಾ ವಿರುದ್ಧ ಪಂದ್ಯ ಹೊರತುಪಡಿಸಿ ಪಾಕಿಸ್ತಾನ, ಐರ್ಲ್ಯಾಂಡ್ ಹಾಗೂ ಅಮೆರಿಕ ವಿರುದ್ಧ ಪಂದ್ಯಗಳನ್ನು ಜಯಿಸಿದೆ. ಲೌಡರ್ಹಿಲ್ ನಲ್ಲಿ ಕೆನಡಾ ವಿರುದ್ಧ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಸೂಪರ್-8 ಹಂತದಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯ ವಿರುದ್ಧ ಜಯ ಸಾಧಿಸಿದ್ದ ಭಾರತವು ಗ್ರೂಪ್-1ರಲ್ಲಿ ಅಗ್ರ ಸ್ಥಾನ ಪಡೆದಿತ್ತು. ಸೆಮಿ ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ಸೋಲುಣಿಸಿ 10 ವರ್ಷಗಳ ನಂತರ ಟಿ20 ವಿಶ್ವಕಪ್ ನಲ್ಲಿ ಫೈನಲ್ ಗೆ ತಲುಪಿದೆ.
ದಕ್ಷಿಣ ಆಫ್ರಿಕಾ ಕೂಡ ಟೂರ್ನಿಯಲ್ಲಿ ಸತತ 8 ಪಂದ್ಯಗಳನ್ನು ಜಯಿಸಿ ಪರಿಪೂರ್ಣ ದಾಖಲೆ ಹೊಂದಿದೆ. ಗ್ರೂಪ್ ಹಂತದಲ್ಲಿ ಶ್ರೀಲಂಕಾ, ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ ಹಾಗೂ ನೇಪಾಳದ ವಿರುದ್ಧ ಜಯ ಸಾಧಿಸಿತ್ತು. ಸೂಪರ್-8 ಪಂದ್ಯದಲ್ಲಿ ಅಮೆರಿಕ, ಇಂಗ್ಲೆಂಡ್ ಹಾಗೂ ವೆಸ್ಟ್ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿದ್ದ ಹರಿಣ ಪಡೆ ಸೆಮಿ ಫೈನಲ್ ನಲ್ಲಿ ಅಫ್ಘಾನಿಸ್ತಾನವನ್ನು 9 ವಿಕೆಟ್ ಗಳಿಂದ ಮಣಿಸಿ ಮೊದಲ ಬಾರಿ ಫೈನಲ್ ಗೆ ತಲುಪಿದೆ.
ಹರಿಣ ಪಡೆಗೆ ಸೂರ್ಯನ ಭೀತಿ
ಗ್ರ್ಯಾಂಡ್ ಫಿನಾಲೆಯಲ್ಲಿ ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾದ ಬೆವರಿಳಿಸುವ ಸಾಧ್ಯತೆಯಿದೆ. ಬಲಗೈ ದಾಂಡಿಗ ಆಫ್ರಿಕಾ ವಿರುದ್ಧ ಆಡಿರುವ 6 ಪಂದ್ಯಗಳಲ್ಲಿ 68.60ರ ಸರಾಸರಿಯಲ್ಲಿ ಒಟ್ಟು 343 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 4 ಅರ್ಧಶತಕಗಳಿವೆ. ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಗಳಿಸಿದ 3ನೇ ಆಟಗಾರನಾಗಿದ್ದಾರೆ.
ಸ್ಪಿನ್ನರ್ ಕುಲದೀಪ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್ಬರ್ಗ್ನಲ್ಲಿ ಆಡಿರುವ ಹಿಂದಿನ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದರು.
ಭಾರತ ವಿರುದ್ಧ ದಕ್ಷಿಣ ಆಫ್ರಿಕಾದ ಬಹುತೇಕ ಬೌಲರ್ ಗಳು ಉತ್ತಮ ದಾಖಲೆ ಹೊಂದಿಲ್ಲ. ಆಫ್ರಿಕಾದ ತ್ರಿವಳಿ ವೇಗಿಗಳಾದ ಮಾರ್ಕೊ ಜಾನ್ಸನ್, ಅನ್ರಿಚ್ ನೋರ್ಟ್ಜೆ ಹಾಗೂ ಕಾಗಿಸೊ ರಬಾಡ ಭಾರತ ವಿರುದ್ಧ ಹೆಚ್ಚು ಯಶಸ್ಸು ಸಾಧಿಸಿಲ್ಲ.
ರಬಾಡ ಭಾರತ ವಿರುದ್ಧ ಆಡಿರುವ 12 ಪಂದ್ಯಗಳಲ್ಲಿ ಕೇವಲ 8 ವಿಕೆಟ್ ಗಳನ್ನು ಪಡೆದಿದ್ದರೆ, ಎಡಗೈ ವೇಗಿ ಮಾರ್ಕೊ ಜಾನ್ಸನ್ 2 ಪಂದ್ಯಗಳಲ್ಲಿ 2 ವಿಕೆಟ್ ಕಬಳಿಸಿದ್ದಾರೆ. ಎಡಗೈ ಸ್ಪಿನ್ನರ್ ತಬ್ರೈಝ್ ಶಮ್ಸಿ ಭಾರತ ವಿರುದ್ಧ ಆಡಿರುವ 12 ಪಂದ್ಯಗಳಲ್ಲಿ ಕೇವಲ 7 ವಿಕೆಟ್ ಉರುಳಿಸಿದ್ದಾರೆ. ಅನ್ರಿಚ್ ನೋರ್ಟ್ಜೆ ಭಾರತದ ಎದುರು 9 ಪಂದ್ಯಗಳಲ್ಲಿ 6 ವಿಕೆಟ್ ಗಳನ್ನು ಪಡೆದಿದ್ದಾರೆ.
ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ ಭಾರತ ವಿರುದ್ಧ 10 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದಾರೆ.
ಡೇವಿಡ್ ಮಿಲ್ಲರ್, ಕ್ವಿಂಟನ್ ಡಿಕಾಕ್
ಎಡಗೈ ಬ್ಯಾಟರ್ ಡೇವಿಡ್ ಮಿಲ್ಲರ್ ಭಾರತ ವಿರುದ್ಧ ಟಿ20 ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿರುವ ದಕ್ಷಿಣ ಆಫ್ರಿಕಾದ ಆಟಗಾರನಾಗಿದ್ದಾರೆ. ಟಿ20 ಪಂದ್ಯಗಳಲ್ಲಿ 43ರ ಸರಾಸರಿಯಲ್ಲಿ ಒಂದು ಶತಕ ಹಾಗೂ 2 ಅರ್ಧಶತಕ ಸಹಿತ ಒಟ್ಟು 431 ರನ್ ಗಳಿಸಿದ್ದಾರೆ.
ಕ್ವಿಂಟನ್ ಡಿಕಾಕ್ ಕೂಡ ಭಾರತ ವಿರುದ್ಧ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. 10 ಪಂದ್ಯಗಳಲ್ಲಿ 44.57ರ ಸರಾಸರಿಯಲ್ಲಿ 4 ಅರ್ಧಶತಕ ಸಹಿತ ಒಟ್ಟು 312 ರನ್ ಗಳಿಸಿದ್ದಾರೆ. ಮಿಲ್ಲರ್ ಹಾಗೂ ಡಿಕಾಕ್ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಲ್ಲಿದ್ದು, ರವೀಂದ್ರ ಜಡೇಜ ಹಾಗೂ ಅಕ್ಷರ್ ಪಟೇಲ್ ಈ ಇಬ್ಬರನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ಪಾಲಿಗೆ ಐತಿಹಾಸಿಕ ಕ್ಷಣ
ಪುರುಷರ ಏಕದಿನ ಇಲ್ಲವೇ ಟಿ20 ವಿಶ್ವಕಪ್ ಫೈನಲ್ ನಲ್ಲಿ ಇದೇ ಮೊದಲ ಬಾರಿ ಸ್ಪರ್ಧಿಸುತ್ತಿರುವ ದಕ್ಷಿಣ ಆಫ್ರಿಕಾದ ಪಾಲಿಗೆ ಇದು ಐತಿಹಾಸಿಕ ಕ್ಷಣವಾಗಿದೆ. 1998ರಲ್ಲಿ ಮೊದಲ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿರುವುದನ್ನು ಹೊರತುಪಡಿಸಿ ಐಸಿಸಿ ಆಯೋಜಿತ ಯಾವುದೇ ಪುರುಷರ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಗೆ ತಲುಪಿಲ್ಲ.
ಏಕದಿನ ವಿಶ್ವಕಪ್ ನಲ್ಲಿ ಐದು ಬಾರಿ(1992, 1999, 2007, 2015, 2023)ಸೆಮಿ ಫೈನಲ್ ಗೆ ತಲುಪಿದ್ದ ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವಕಪ್ ನಲ್ಲಿ 2009 ಹಾಗೂ 2014ರಲ್ಲಿ ಸೆಮಿ ಫೈನಲ್ ಗೆ ಪ್ರವೇಶಿಸಿತ್ತು. ಇದೀಗ ಮೊದಲ ಬಾರಿ ಫೈನಲ್ ಗೆ ತಲುಪಿರುವ ಆಫ್ರಿಕಾ ತಂಡಕ್ಕೆ ಚೊಚ್ಚಲ ವಿಶ್ವಕಪ್ ಟ್ರೋಫಿ ಗೆಲ್ಲುವುದಕ್ಕೆ ಇನ್ನೊಂದು ಗೆಲುವಿನ ಅಗತ್ಯವಿದೆ.
ಭಾರತಕ್ಕೆ ಅತ್ಯಂತ ಮಹತ್ವದ ಪಂದ್ಯ
ಭಾರತ ಕ್ರಿಕೆಟ್ ತಂಡ 2007ರಲ್ಲಿ ಮೊತ್ತ ಮೊದಲ ಟಿ20 ವಿಶ್ವಕಪ್ ಜಯಿಸಿತ್ತು. 2011ರ ನಂತರ ಭಾರತವು ವಿಶ್ವಕಪ್ ಪ್ರಶಸ್ತಿ ಜಯಿಸಿಲ್ಲ. 2013ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕೊನೆಯ ಬಾರಿ ಭಾರತ ಐಸಿಸಿ ಪ್ರಶಸ್ತಿ ಜಯಿಸಿತ್ತು. 2014ರ ಟಿ20 ವಿಶ್ವಕಪ್ ನಲ್ಲಿ ಫೈನಲ್ ಗೆ ತಲುಪಿದ್ದ ಭಾರತವು 2016 ಹಾಗೂ 2022ರಲ್ಲಿ ಸೆಮಿ ಫೈನಲ್ ಗೆ ತಲುಪಿತ್ತು. 2015 ಹಾಗೂ 2019ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಸೆಮಿ ಫೈನಲ್ ಗೆ ತಲುಪಿದ್ದ ಭಾರತ ಹಲವು ಬಾರಿ ಫೈನಲ್ ಗೆ ತಲುಪಲು ಯತ್ನಿಸಿದೆ. ಕಳೆದ ವರ್ಷ ತಾಯ್ನಾಡಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ನಲ್ಲಿ ಅಜೇಯ ದಾಖಲೆಯೊಂದಿಗೆ ಫೈನಲ್ ಗೆ ತಲುಪಿದ್ದ ರೋಹಿತ್ ಪಡೆ ಆಸ್ಟ್ರೇಲಿಯ ವಿರುದ್ಧ ಆಘಾತಕಾರಿ ಸೋಲುಂಡಿತ್ತು. ಒಂದು ವರ್ಷದೊಳಗೆ ತನಗಾಗಿರುವ ಗಾಯವನ್ನು ಗುಣಪಡಿಸಿಕೊಳ್ಳುವ ಹಾಗೂ ಜಾಗತಿಕ ಟೂರ್ನಿಗಳಲ್ಲಿ ಎದುರಿಸುತ್ತಿರುವ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಅಪೂರ್ವ ಅವಕಾಶ ಭಾರತಕ್ಕೆ ಒದಗಿ ಬಂದಿದೆ.
ಪಿಚ್ ಹಾಗೂ ವಾತಾವರಣ
ಬಾರ್ಬಡೋಸ್ ಸ್ಟೇಡಿಯಮ್ನಲ್ಲಿ ವಿಶ್ವಕಪ್ ಟೂರ್ನಿಯ 9ನೇ ಪಂದ್ಯವು ಶನಿವಾರ ನಡೆಯಲಿದೆ. ಈ ಮೈದಾನದಲ್ಲಿ ನಡೆದಿದ್ದ ಮೊದಲ ಪಂದ್ಯದ ಫಲಿತಾಂಶ ಸೂಪರ್ ಓವರ್ನಲ್ಲಿ ನಿರ್ಧಾರವಾಗಿತ್ತು. ಆ ನಂತರ ಯಾವುದೇ ರೋಚಕ ಪಂದ್ಯ ನಡೆದಿಲ್ಲ.
ಈ ಮೈದಾನದಲ್ಲಿ ಪೂರ್ಣಗೊಂಡಿರುವ 4 ಪಂದ್ಯಗಳಲ್ಲಿ ಮೂರು ಪಂದ್ಯವನ್ನು ಮೊದಲು ಬ್ಯಾಟಿಂಗ್ ಮಾಡಿದ್ದ ತಂಡಗಳು ಗೆದ್ದುಕೊಂಡಿವೆ. ಇಂಗ್ಲೆಂಡ್ ವಿರುದ್ಧ ಪಂದ್ಯ ರದ್ದಾಗುವ ಮೊದಲು ಸ್ಕಾಟ್ಲ್ಯಾಂಡ್ ತಂಡ 10 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 90 ರನ್ ಗಳಿಸಿತ್ತು. ಹಿಂದಿನ ಎರಡು ಪಂದ್ಯಗಳಲ್ಲಿ ವೆಸ್ಟ್ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಅಮೆರಿಕವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದ್ದವು. ಸುಲಭವಾಗಿ ರನ್ ಚೇಸ್ ಮಾಡಿದ್ದವು.
ಪ್ರಸಕ್ತ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಈ ಮೈದಾನದಲ್ಲಿ ಆಡಿಲ್ಲ. ಭಾರತ ಇಲ್ಲಿ ಒಂದು ಪಂದ್ಯವನ್ನು ಆಡಿದ್ದು, ಅಫ್ಘಾನಿಸ್ತಾನ ವಿರುದ್ಧ 47 ರನ್ನಿಂದ ಜಯ ಸಾಧಿಸಿತ್ತು.
ಅಕ್ಯುವೆದರ್ ಪ್ರಕಾರ ಸ್ವಲ್ಪ ಮಳೆ ಬೀಳುವ ನಿರೀಕ್ಷೆ ಇದ್ದು. ಬೆಳಗ್ಗೆ 4ರಿಂದ 9ರ ನಡುವೆ ಮಳೆಯಾಗುವ ಸಾಧ್ಯತೆಯಿದೆ. ಶನಿವಾರವೇ ಪಂದ್ಯವನ್ನು ಪೂರ್ಣಗೊಳಿಸಲು 190 ನಿಮಿಷ ಹೆಚ್ಚುವರಿ ಸಮಯ ನೀಡಲಾಗಿದೆ. ವಿಜೇತರನ್ನು ಘೋಷಿಸಲು ಉಭಯ ತಂಡಗಳು ಕನಿಷ್ಟ 10 ಓವರ್ ಪಂದ್ಯ ಆಡಿರಬೇಕು.
ಫೈನಲ್ ಪಂದ್ಯಕ್ಕೆ ಮೀಸಲು ದಿನ ನಿಗದಿ
ಶನಿವಾರದಂದು ಪ್ರತಿಕೂಲ ಹವಾಗುಣದಿಂದ ಹೆಚ್ಚುವರಿ ಸಮಯದಲ್ಲೂ ಕನಿಷ್ಠ ತಲಾ 10 ಓವರ್ ಪಂದ್ಯ ಆಡಲು ಸಾಧ್ಯವಾಗದೇ ಇದ್ದರೆ ಮೀಸಲು ದಿನವಾದ ರವಿವಾರ ಪಂದ್ಯವನ್ನು ನಡೆಸಲಾಗುತ್ತದೆ. ಪಂದ್ಯ ಅದಾಗಲೇ ಆರಂಭವಾಗಿದ್ದರೆ ಶನಿವಾರ ಎಲ್ಲಿ ನಿಂತಿದೆಯೋ ಅಲ್ಲಿಂದಲೇ ಮುಂದುವರಿಯಲಿದೆ. ಒಂದು ವೇಳೆ ಮೀಸಲು ದಿನದಲ್ಲೂ ಪ್ರತಿಕೂಲ ಹವಾಮಾನದಿಂದ ಪಂದ್ಯ ನಡೆಯದೇ ಇದ್ದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
ಪಂದ್ಯ ಆರಂಭದ ಸಮಯ: ರಾತ್ರಿ 8:00