ಟರ್ಕಿ: ಮೈದಾನದಲ್ಲಿ ರೆಫರಿಗೆ ಕ್ಲಬ್ ಅಧ್ಯಕ್ಷ, ಸಂಗಡಿಗರಿಂದ ಹಲ್ಲೆ
ಸೂಪರ್ ಲೀಗ್ ಪಂದ್ಯಾವಳಿ ಅನಿರ್ದಿಷ್ಟಾವಧಿಗೆ ಅಮಾನತು
Photo : NDTV
ಅಂಕಾರ (ಟರ್ಕಿ): ಟರ್ಕಿಯಲ್ಲಿ ಸೋಮವಾರ ರಾತ್ರಿ ನಡೆದ ಫುಟ್ಬಾಲ್ ಪಂದ್ಯವೊಂದರ ವೇಳೆ, ಕ್ಲಬ್ ಒಂದರ ಅಧ್ಯಕ್ಷನು ತನ್ನ ಸಂಗಡಿಗರೊಂದಿಗೆ ರೆಫರಿ ಮೇಲೆ ಆಕ್ರಮಣ ನಡೆಸಿರುವ ಘಟನೆ ವರದಿಯಾಗಿದೆ.
ಈ ಘಟನೆಯ ಬಳಿಕ, ಸೂಪರ್ ಲೀಗ್ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ. ರೆಫರಿಗೆ ಹಲ್ಲೆಗೈದು ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ಅಂಕಾರಗುಕು ಕ್ಲಬ್ ಅಧ್ಯಕ್ಷ ಫಾರೂಕ್ ಕೋಕ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ.
ಅಂಕಾರದಲ್ಲಿ ಸೋಮವಾರ ರಾತ್ರಿ ಅಂಕಾರಗುಕು ಕ್ಲಬ್ ಮತ್ತು ಕೇಕುರ್ ರಿಝೆಸ್ಪೋರ್ ಕ್ಲಬ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಪಂದ್ಯ ನಿಂತ ತಕ್ಷಣ ಫಾರೂಕ್ ಕೋಕ ತನ್ನ ಸಂಗಡಿಗರೊಂದಿಗೆ ಮೈದಾನಕ್ಕೆ ಧಾವಿಸಿ ರೆಫರಿ ಹಲೀಲ್ ಉಮುತ್ ಮೆಲೆರ್ ಮುಖಕ್ಕೆ ಗುದ್ದಿರುವುದನ್ನು ವೀಡಿಯೊಗಳು ತೋರಿಸಿವೆ.
ರೆಫರಿಯು ಕೇಕುರ್ ರಿಝೆಸ್ಪೋರ್ ತಂಡಕ್ಕೆ ಸ್ಟಾಪೇಜ್-ಟೈಮ್ ಪೆನಾಲ್ಟಿ ಕಿಕ್ ನೀಡಿರುವುದು ಕೋಕನ ಆಕ್ರೋಶಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಈ ಪೆನಾಲ್ಟಿ ಕಿಕ್ನ ಮೂಲಕ ಸಂದರ್ಶಕ ತಂಡವು 1-1ರ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಹಲ್ಲೆಯ ವೇಳೆ ರೆಫರಿ ನೆಲಕ್ಕೆ ಬಿದ್ದರು. ಆಗ ಅವರಿಗೆ ಹಲವಾರು ಮಂದಿ ತುಳಿಯುವುದನ್ನು ವೀಡಿಯೊಗಳು ತೋರಿಸಿವೆ.
ಕೋಕ ತನಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆಸ್ಪತ್ರೆಗೆ ದಾಖಲಾದ ಬಳಿಕ ರೆಫರಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
“ನಾನು ನಿಮ್ಮನ್ನು ಮುಗಿಸುತ್ತೇನೆ’ ಎಂದು ಕೋಕ ನನಗೆ ಮತ್ತು ಇತರ ರೆಫರಿಗಳಿಗೆ ಹೇಳಿದ್ದಾರೆ. ಬಳಿಕ, ನನ್ನನ್ನು ಉದ್ದೇಶಿಸಿ, ‘ನಾನು ನಿನ್ನನ್ನು ಕೊಲ್ಲುತ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆ” ಎಂದು ಅವರು ಹೇಳಿದ್ದಾರೆ.
ಒಂದು ಕಾಲದ ಫುಟ್ಬಾಲ್ ಆಟಗಾರ ಹಾಗೂ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಸೋಮವಾರ ತಡ ರಾತ್ರಿ ಹೇಳಿಕೆಯೊಂದನ್ನು ನೀಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೆಫರಿಯೊಂದಿಗೆ ಫೋನ್ನಲ್ಲಿ ಮಾತನಾಡಿದ್ದಾರೆ.