ಟ್ವೆಂಟಿ-20 ರ್ಯಾಂಕಿಂಗ್: ದೀಪ್ತಿ ಶರ್ಮಾಗೆ ಭಡ್ತಿ
ದೀಪ್ತಿ ಶರ್ಮಾ | Photo: PTI
ಹೊಸದಿಲ್ಲಿ : ಭಾರತದ ದೀಪ್ತಿ ಶರ್ಮಾ ಮಂಗಳವಾರ ಬಿಡುಗಡೆಯಾಗಿರುವ ಐಸಿಸಿ ಮಹಿಳೆಯರ ಟ್ವೆಂಟಿ-20 ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಒಂದು ಸ್ಥಾನ ಭಡ್ತಿ ಪಡೆದು ಜಂಟಿ 2ನೇ ಸ್ಥಾನ ಪಡೆದರೆ, ದೀಪ್ತಿಯ ಸಹ ಆಟಗಾರ್ತಿ ರೇಣುಕಾ ಸಿಂಗ್ ಒಂದು ಸ್ಥಾನ ಮೇಲಕ್ಕೇರಿ 10ನೇ ಸ್ಥಾನ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಮ್ಲಾಬಾ ಆಸ್ಟ್ರೇಲಿಯ ವಿರುದ್ಧ 2 ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದು 2ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದ ಕಾರಣ ದೀಪ್ತಿ ಭಡ್ತಿ ಪಡೆದಿದ್ದಾರೆ.
ದೀಪ್ತಿ ಅವರು ಪಾಕಿಸ್ತಾನದ ಸಾದಿಯಾ ಇಕ್ಬಾಲ್ರೊಂದಿಗೆ 2ನೇ ಸ್ಥಾನ ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ನ ಸಾರ್ಹಾ ಗ್ಲೆನ್ 4ನೇ ಸ್ಥಾನದಲ್ಲಿದ್ದಾರೆ. ಬೌಲರ್ ಗಳ ಟಿ-20 ರ್ಯಾಂಕಿಂಗ್ ನಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಸೋಫಿ ಎಕ್ಸೆಲ್ಸ್ಟೋನ್ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ.
ಆಲ್ರೌಂಡರ್ಗಳ ವಿಭಾಗದಲ್ಲಿ ಅಗ್ರ-10ರಲ್ಲಿ ಯಾವುದೇ ಬದಲಾವಣೆ ಇಲ್ಲ. ದೀಪ್ತಿ 4ನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಭಾರತದ ಉಪ ನಾಯಕಿ ಸ್ಮತಿ ಮಂಧಾನ ತನ್ನ 4ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಜೆಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ ಹಾಗೂ ಹರ್ಮನ್ಪ್ರೀತ್ ಕೌರ್ ಕ್ರಮವಾಗಿ 13ನೇ, 16ನೇ ಹಾಗೂ 17ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಆಸ್ಟ್ರೇಲಿಯದ ಬೆತ್ ಮೂನಿ ತನ್ನ ಸಹ ಆಟಗಾರ್ತಿ ತಹಲಿಯಾ ಮೆಕ್ರಾತ್ರನ್ನು ಹಿಂದಿಕ್ಕಿ ಬ್ಯಾಟರ್ಗಳ ಟಿ-20 ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಮೂನಿ 2024ರಲ್ಲಿ ಈಗಾಗಲೇ ಎರಡು ಅರ್ಧಶತಕಗಳನ್ನು ಗಳಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಕ್ಯಾನ್ಬೆರಾದಲ್ಲಿ ಕೇವಲ 57 ಎಸೆತಗಳಲ್ಲಿ ಔಟಾಗದೆ 72 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ 24 ಹಾಗೂ 23 ರನ್ ಗಳಿಸಿದ್ದ ಮೆಕ್ಗ್ರಾತ್ ಎರಡನೇ ಸ್ಥಾನ ಪ ಡೆದಿದ್ದಾರೆ. ದ.ಆಫ್ರಿಕಾದ ನಾಯಕಿ ಲೌರಾ ವಾಲ್ವಾರ್ಟ್ 3ನೇ ಸ್ಥಾನ ಉಳಿಸಿಕೊಂಡಿದ್ದಾರೆ.