ಟ್ವೆಂಟಿ-20 ವಿಶ್ವಕಪ್: ಬಾಂಗ್ಲಾದೇಶ ವಿರುದ್ಧ ಭಾರತ ಏಕೈಕ ಅಭ್ಯಾಸ ಪಂದ್ಯ ಆಡುವ ಸಾಧ್ಯತೆ
ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ಡಲ್ಲಾಸ್ ನಲ್ಲಿ ಸಹ ಆತಿಥ್ಯದೇಶ ಅಮೆರಿಕದ ವಿರುದ್ಧ ಕೆನಡಾ ಜೂನ್ 1ರಂದು 2024ರ ಟಿ-20 ವಿಶ್ವಕಪ್ ಟೂರ್ನಮೆಂಟ್ ನ ಆರಂಭಿಕ ಪಂದ್ಯವನ್ನು ಆಡುವ ದಿನದಂದೇ ನ್ಯೂಯಾರ್ಕ್ ನಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಏಕೈಕ ಅಭ್ಯಾಸ ಪಂದ್ಯವನ್ನು ಆಡುವ ಸಾಧ್ಯತೆ ಇದೆ.
ಐಸೆನ್ಹೋವರ್ಪಾರ್ಕ್ನಲ್ಲಿ 34,000 ಸಾಮರ್ಥ್ಯದ ತಾತ್ಕಾಲಿಕ ಕ್ರೀಡಾಂಗಣವನ್ನು ಲೆಜೆಂಡರಿ ಓಟಗಾರ ಉಸೈನ್ ಬೋಲ್ಟ್ ಬುಧವಾರ ಅಧಿಕೃತವಾಗಿ ಉದ್ಘಾಟಿಸಿದರು.
ಐಸಿಸಿ ಟೂರ್ನಿಗಳಲ್ಲಿ ಸಾಮಾನ್ಯವಾಗಿ ತಂಡಗಳು ಎರಡು ಅಭ್ಯಾಸ ಪಂದ್ಯಗಳನ್ನು ಆಡುತ್ತವೆ. ಆದರೆ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಎಲ್ಲ 20 ತಂಡಗಳಿಗೆ ಸರಿಯಾಗಿ ಅಭ್ಯಾಸ ಪಂದ್ಯ ಆಡಲು ಸಾಧ್ಯವಾಗುತ್ತಿಲ್ಲ.
ಟ್ವೆಂಟಿ-20 ವಿಶ್ವಕಪ್ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ಮೇ 26ರಂದು ಐಪಿಎಲ್ ಟಿ-20 ಟೂರ್ನಿಯು ಮುಕ್ತಾಯವಾಗಲಿದೆ.
ಭಾರತವು ತನ್ನ ಮೊದಲ ಮೂರು ಲೀಗ್ ಪಂದ್ಯಗಳನ್ನು ನ್ಯೂಯಾರ್ಕ್ನಲ್ಲಿ ಆಡಲಿದೆ. ಪ್ರಯಾಣವನ್ನು ತಪ್ಪಿಸಲು ಭಾರತವು ನ್ಯೂಯಾರ್ಕ್ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯ ಆಡಲು ಬಯಸಿದೆ. ಅಮೆರಿಕದ ಡಲ್ಲಾಸ್ ಹಾಗೂ ಮಯಾಮಿ ಸಮೀಪದ ಫೋರ್ಟ್ ಲೌಡರ್ಹಿಲ್ನಲ್ಲಿ ವಿಶ್ವಕಪ್ ಪಂದ್ಯಗಳು ನಡೆಯುತ್ತವೆ.
ನ್ಯೂಯಾರ್ಕ್ನಲ್ಲಿ ಅಭ್ಯಾಸ ಪಂದ್ಯ ಆಡುವುದರಿಂದ ಭಾರತಕ್ಕೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಉದ್ಯಾನವನದಲ್ಲಿ ನಿರ್ಮಿಸಲಾಗಿರುವ ಕ್ರೀಡಾಂಗಣವನ್ನು ಐದು ತಿಂಗಳೊಳಗೆ ಸಿದ್ಧಗೊಳಿಸಲಾಗಿದೆ.
ಈ ವಿಶ್ವಕಪ್ಗೆ ವೇಳಾಪಟ್ಟಿ ನಿಜವಾಗಿಯೂ ಬಿಗಿಯಾಗಿದೆ. ಇದನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು. ಐಪಿಎಲ್ ಫೈನಲ್ ಹಾಗೂ ವಿಶ್ವಕಪ್ ಆರಂಭಿಕ ಪಂದ್ಯದ ನಡುವೆ ಅಂತರದ ಅಗತ್ಯವಿದೆ. ಟೂರ್ನಮೆಂಟ್ ಆರಂಭವಾಗುವ 24 ಗಂಟೆಗಳ ಮೊದಲು ಪಾಕಿಸ್ತಾನ ಹಾಗೂ ಇಂಗ್ಲೆಂಡ್ನಂತಹ ತಂಡಗಳು ಸರಣಿಯನ್ನು ಆಡಲಿವೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.
ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ನಾಲ್ಕನೇ ಹಾಗೂ ಅಂತಿಮ ಟಿ-20 ಪಂದ್ಯವು ಮೇ 30ರಂದು ಲಂಡನ್ನಲ್ಲಿ ನಿಗದಿಯಾಗಿದೆ. ಪಾಕಿಸ್ತಾನವು ಜೂನ್ 6ರಂದು ಡಲ್ಲಾಸ್ನಲ್ಲಿ ಅಮೆರಿಕದ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಜೂನ್ 4ರಂದು ಬಾರ್ಬಡೋಸ್ನಲ್ಲಿ ಇಂಗ್ಲೆಂಡ್ ತಂಡವು ಸ್ಕಾಟ್ಲ್ಯಾಂಡ್ ತಂಡವನ್ನು ಎದುರಿಸಲಿದೆ.
ಈ ಬಾರಿಯ ವಿಶ್ವಕಪ್ನಲ್ಲಿ ದಾಖಲೆ 20 ತಂಡಗಳು ಭಾಗವಹಿಸುತ್ತಿವೆ. 16 ತಂಡಗಳು ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯದಲ್ಲಿ ನಡೆದಿದ್ದ ಹಿಂದಿನ ಆವೃತ್ತಿಯ ವಿಶ್ವಕಪ್ನಲ್ಲಿ ಭಾಗವಹಿಸಿದ್ದವು.
ಅಮೆರಿಕ, ಕೆನಡಾ ಹಾಗೂ ಉಗಾಂಡ ತಂಡಗಳು ಈ ಬಾರಿ ಟಿ-20 ವಿಶ್ವಕಪ್ಗೆ ಪಾದಾರ್ಪಣೆ ಮಾಡಲಿವೆ.