ಐರ್‌ಲ್ಯಾಂಡ್ ವಿರುದ್ಧ ಟ್ವೆಂಟಿ-20 ಸರಣಿ: ಭಾರತ ತಂಡಕ್ಕೆ ಬುಮ್ರಾ ವಾಪಸ್
ಹೊಸದಿಲ್ಲಿ, ಜು.31: ಸಂಪೂರ್ಣ ಫಿಟ್ ಆಗಿರುವ ಜಸ್‌ಪ್ರೀತ್ ಬುಮ್ರಾ ಆಗಸ್ಟ್‌ನಲ್ಲಿ ಐರ್‌ಲ್ಯಾಂಡ್ ವಿರುದ್ದದ ಟ್ವೆಂಟಿ-20 ತಂಡದಲ್ಲಿ ನಾಯಕನ ಪಾತ್ರದಲ್ಲಿ ಟೀಮ್ ಇಂಡಿಯಾಕ್ಕೆ ವಾಪಸಾಗಲಿದ್ದಾರೆ.
ಡಬ್ಲಿನ್‌ನಲ್ಲಿ ನಡೆಯುವ 3 ಪಂದ್ಯಗಳ ಸರಣಿಗೆ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಕೂಡ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಜಿ. ಕಸ್ತೂರಿರಂಗನ್ ಸ್ಮಾರಕ ಟ್ರೋಫಿಗಾಗಿ ನಡೆದ ಕೆಎಸ್‌ಸಿಎ ಟಿ-20 ಟೂರ್ನಮೆಂಟ್‌ನಲ್ಲಿ 4 ವಿಕೆಟ್‌ಗಳನ್ನು(4-36) ಕಬಳಿಸಿದ ಕೃಷ್ಣ ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗಿದ್ದಾರೆ. 11 ಏಕದಿನ ಪಂದ್ಯಗಳನ್ನು ಆಡಿರುವ ಕೃಷ್ಣ 2022ರ ಆಗಸ್ಟ್‌ನಲ್ಲಿ ಝಿಂಬಾಬ್ವೆ ವಿರುದ್ಧ ಕೊನೆಯ ಪಂದ್ಯ ಆಡಿದ್ದು ಆ ನಂತರ ಗಾಯಗೊಂಡಿದ್ದರು.
ಕಳೆದ ಸೆಪ್ಟಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ಟಿ-20 ಸರಣಿಯನ್ನು ಆಡಿದ ನಂತರ ಬುಮ್ರಾ ಸಕ್ರಿಯ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. ಕಳೆದ 2 ತಿಂಗಳುಗಳಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿದ್ದ(ಎನ್‌ಸಿಎ)ಬುಮ್ರಾ ನಿಧಾನವಾಗಿ ತನ್ನ ಬೌಲಿಂಗ್ ವರ್ಕ್‌ಲೋಡ್ ಹೆಚ್ಚಿಸಿಕೊಂಡಿದ್ದಾರೆ. ಬುಮ್ರಾ ನ್ಯೂಝಿಲ್ಯಾಂಡ್‌ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಬುಮ್ರಾ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು.
ಐರ್‌ಲ್ಯಾಂಡ್ ಪ್ರವಾಸಕ್ಕೆ ಭಾರತದ ಟಿ-20 ತಂಡ: ಜಸ್‌ಪ್ರೀತ್ ಬುಮ್ರಾ(ನಾಯಕ), ಋತುರಾಜ್ ಗಾಯಕ್ವಾಡ್(ಉಪ ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್), ಜಿತೇಶ್ ಶರ್ಮಾ(ವಿಕೆಟ್‌ಕೀಪರ್), ಶಿವಂ ದುಬೆ, ವಾಶಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್, ಅವೇಶ್ ಖಾನ್.