ಅಂಡರ್-19 ಏಶ್ಯಕಪ್ | ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್ ತಂಡಕ್ಕೆ ಸೋಲು
ದುಬೈ : ಆಲ್‌ರೌಂಡ್ ಪ್ರದರ್ಶನ ನೀಡಿದ ಪಾಕಿಸ್ತಾನ ಕ್ರಿಕೆಟ್ ತಂಡ ಟೀಮ್ ಇಂಡಿಯಾವನ್ನು ಅಂಡರ್-19 ಏಶ್ಯಕಪ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ 44 ರನ್‌ಗಳಿಂದ ಮಣಿಸಿದೆ.
ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 282 ರನ್ ಗುರಿ ಬೆನ್ನಟ್ಟಿದ ಭಾರತ ತಂಡವು ಕಳಪೆ ಆರಂಭದಿಂದ ಚೇತರಿಸಿಕೊಳ್ಳುವಲ್ಲಿ ವಿಫಲವಾಗಿ 47.1 ಓವರ್‌ಗಳಲ್ಲಿ 238 ರನ್ ಗಳಿಸಿ ಆಲೌಟಾಯಿತು.
ಶಹಝೈಬ್ ಖಾನ್(159 ರನ್)ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ನಂತರ ಪಾಕಿಸ್ತಾನದ ಬೌಲರ್‌ಗಳು ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದರು.
ಭಾರತದ ಮೂವರು ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಆಯಷ್ ಮ್ಹಾತ್ರೆ(20 ರನ್), ವೈಭವ್ ಸೂರ್ಯವಂಶಿ(1 ರನ್)ಹಾಗೂ ಎ.ಸಿದ್ದಾರ್ಥ್(15 ರನ್)ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ನಾಯಕ ಮುಹಮ್ಮದ್ ಅನಾನ್ 16 ರನ್ ಗಳಿಸಿ ಔಟಾದರು.
ಭಾರತ ತಂಡವು ಮಧ್ಯಮ ಓವರ್‌ನಲ್ಲಿ ಒಂದಷ್ಟು ಹೋರಾಟ ನೀಡಿದ್ದು, ನಿಖಿಲ್ ಕುಮಾರ್ 67 ರನ್(77 ಎಸೆತ, 6 ಬೌಂಡರಿ, 3 ಸಿಕ್ಸರ್) ಗಳಿಸಿದರು.ಕಿರಣ್(20 ರನ್) ಹಾಗೂ ಹರ್‌ವಂಶ್ ಸಿಂಗ್(26 ರನ್) ಉಪಯುಕ್ತ ಕಾಣಿಕೆಗಳನ್ನು ನೀಡಿದರು.
ಮುಹಮ್ಮದ್ ಎನಾನ್(30 ರನ್, 22 ಎಸೆತ) ಹಾಗೂ ಯುದ್ದಜೀತ್ ಗುಹಾ(ಔಟಾಗದೆ 13, 23 ಎಸೆತ) ಕೊನೆಯ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿ ಭಾರತ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಆದರೆ 48ನೇ ಓವರ್‌ನಲ್ಲಿ ಎನಾನ್ ರನೌಟಾದರು.
ಪಾಕಿಸ್ತಾನದ ಬೌಲಿಂಗ್ ವಿಭಾಗದಲ್ಲಿ ಅಲಿ ರಾಝಾ ಮೂರು ವಿಕೆಟ್‌ಗಳನ್ನು(3-36) ಉರುಳಿಸಿದರೆ, ಅಬ್ದುಲ್ ಸುಭಾನ್(2-46) ಹಾಗೂ ಫಹಾಂ-ವುಲ್-ಹಕ್(2-41) ತಲಾ ಎರಡು ವಿಕೆಟ್‌ಗಳನ್ನು ಪಡೆದರು.
*ಪಾಕಿಸ್ತಾನ 282/7: ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಶಹಝೈಬ್ ಖಾನ್ ಶತಕದ(159 ರನ್, 147 ಎಸೆತ)ಸಹಾಯದಿಂದ 50 ಓವರ್‌ಗಳಲ್ಲಿ 281 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ಖಾನ್ ಹಾಗೂ ಉಸ್ಮಾನ್ ಖಾನ್(60 ರನ್, 94 ಎಸೆತ)ಮೊದಲ ವಿಕೆಟ್‌ನಲ್ಲಿ 30.4 ಓವರ್‌ಗಳಲ್ಲಿ 160 ರನ್ ಗಳಿಸಿ ಪಾಕಿಸ್ತಾನ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ಈ ಇಬ್ಬರನ್ನು ಹೊರತುಪಡಿಸಿ ಉಳಿದ ಆಟಗಾರರು ದೊಡ್ಡ ಮೊತ್ತ ಗಳಿಸಲಿಲ್ಲ. ಮುಹಮ್ಮದ್ ರಿಯಾಝುಲ್ಲಾ(27 ರನ್)ಎರಡಂಕೆ ಸ್ಕೋರ್ ಗಳಿಸಿದರು.
ಭಾರತದ ಪರ ಸಮರ್ಥ್ ನಾಗರಾಜ್(3-45)ಹಾಗೂ ಆಯುಷ್ ಮ್ಹಾತ್ರೆ(2-30)ಐದು ವಿಕೆಟ್‌ಗಳನ್ನು ಹಂಚಿಕೊಂಡರು.