ಯು.ಎಸ್. ಓಪನ್: ಕಾರ್ಲೊಸ್ ಅಲ್ಕರಾಝ್, ಸಬಲೆಂಕಾ ಅಂತಿಮ-16ರ ಸುತ್ತಿಗೆ ಲಗ್ಗೆ
ಕಾರ್ಲೊಸ್ ಅಲ್ಕರಾಝ್ ಹಾಗೂ ಅರ್ಯನಾ ಸಬಲೆಂಕಾ Photo: Twitter/@carlosalcaraz
ಹೊಸದಿಲ್ಲಿ, ಸೆ.3: ವಿಶ್ವದ ಅಗ್ರ ರ್ಯಾಂಕಿನ ಆಟಗಾರ ಕಾರ್ಲೊಸ್ ಅಲ್ಕರಾಝ್ ಹಾಗೂ ಎರಡನೇ ಶ್ರೇಯಾಂಕದ ಅರ್ಯನಾ ಸಬಲೆಂಕಾ ಯು.ಎಸ್. ಓಪನ್ ಟೆನಿಸ್ ಟೂರ್ನಿಯಲ್ಲಿ ಅಂತಿಮ-16ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
ರೋಜರ್ ಫೆಡರರ್(2008ರಲ್ಲಿ)ನಂತರ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಮೊದಲ ಆಟಗಾರನಾಗುವ ಗುರಿ ಇಟ್ಟುಕೊಂಡಿರುವ ಅಲ್ಕರಾಝ್ 3 ಗಂಟೆ, 11 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಬ್ರಿಟನ್ನ ಡ್ಯಾನ್ ಎವನ್ಸ್ರನ್ನು 6-2, 6-3, 4-6, 6-3 ಸೆಟ್ಗಳ ಅಂತರದಿಂದ ರೋಚಕವಾಗಿ ಮಣಿಸಿದರು.
ಸ್ಪೇನ್ನ 20ರ ಹರೆಯದ ಆಟಗಾರ ಪಂದ್ಯದುದ್ದಕ್ಕೂ ತನ್ನ ಕೌಶಲ್ಯವನ್ನು ಪ್ರದರ್ಶಿಸಿದರು. ತನ್ನ ಶಕ್ತಿಶಾಲಿ ಮುಂಗೈ ಹೊಡೆತವನ್ನು ಚೆನ್ನಾಗಿ ಬಳಸಿಕೊಂಡರು.
ಅಲ್ಕರಾಝ್ ಸೋಮವಾರ ನಡೆಯುವ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಮ್ಯಾಟಿಯೊ ಅರ್ನಾಲ್ಡಿ ಅವರನ್ನು ಎದುರಿಸಲಿದ್ದಾರೆ. ಅರ್ನಾಲ್ಡಿ ಬ್ರಿಟನ್ನ ಕ್ಯಾಮರೂನ್ ನೊರ್ರಿ ಅವರನ್ನು 2 ಗಂಟೆಯೊಳಗೆ 6-3, 6-4, 6-3 ಸೆಟ್ಗಳ ಅಂತರದಿಂದ ಸೋಲಿಸಿದರು.
ಆರನೇ ಶ್ರೇಯಾಂಕದ ಜಾನ್ ಸಿನ್ನೆರ್ ಸ್ವಿಸ್ನ ಹಿರಿಯ ಆಟಗಾರ ಸ್ಟ್ಯಾನ್ ವಾವ್ರಿಂಕರನ್ನು 6-3, 2-6, 6-4, 6-2 ಸೆಟ್ಗಳ ಅಂತರದಿಂದ ಸೋಲಿಸಿದರು.
ಕಳೆದ ವರ್ಷ ಟೂರ್ನಮೆಂಟ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ರಶ್ಯದ ಆ್ಯಂಡ್ರೆ ರುಬ್ಲೆವ್ ಫ್ರಾನ್ಸ್ನ ಅರ್ಥರ್ ರಿಂಡರ್ಕ್ನೆಚ್ರನ್ನು 3-6, 6-3, 6-1, 7-5 ಸೆಟ್ಗಳ ಅಂತರದಿಂದ ಸೋಲಿಸಿ ಮುಂದಿನ ಸುತ್ತಿಗೇರಿದರು.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸಬಲೆಂಕಾ ಟೂರ್ನಿಯಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ್ದು 60 ನಿಮಿಷಗಳ ಹೋರಾಟದಲ್ಲಿ ಫ್ರಾನ್ಸ್ನ ಕ್ಲಾರಾ ಬುರೆಲ್ರನ್ನು 6-1, 6-1 ನೇರ ಸೆಟ್ಗಳ ಅಂತರದಿಂದ ಮಣಿಸಿದರು.
ಬೆಲಾರುಸ್ ಆಟಗಾರ್ತಿ ಸೋಮವಾರ ನಡೆಯುವ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ರಶ್ಯದ ಡರಿಯಾ ಕಸಟ್ಕಿನಾರನ್ನು ಎದುರಿಸಲಿದ್ದಾರೆ. ಕಸಟ್ಕಿನಾ ಬೆಲ್ಜಿಯಂನ ಗ್ರೀಟ್ ಮಿನ್ನೆನ್ರನ್ನು 6-3, 6-4 ಸೆಟ್ಗಳ ಅಂತರದಿಂದ ಸೋಲಿಸಿ 4ನೇ ಸುತ್ತಿಗೆ ತಲುಪಿದ್ದಾರೆ.
ಇದೇ ವೇಳೆ, ಮ್ಯಾಡಿಸನ್ ಕೀ ಅವರು ಕೊಕೊ ಗೌಫ್ ನಂತರ ಅಂತಿಮ-16ರ ಸುತ್ತು ತಲುಪಿದ ಅಮೆರಿಕದ 2ನೇ ಆಟಗಾರ್ತಿ ಎನಿಸಿಕೊಂಡರು. ಮ್ಯಾಡಿಸನ್ ರಶ್ಯದ ಸಮ್ಸೋನೋವಾರನ್ನು 5-7, 6-2, 6-2 ಸೆಟ್ಗಳ ಅಂತರದಿಂದ ಸೋಲಿಸಿದ್ದಾರೆ.