ಯು.ಎಸ್. ಓಪನ್: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 4ನೇ ಸುತ್ತಿಗೇರಿದ ಜೊಕೊವಿಕ್
ನೊವಾಕ್ ಜೊಕೊವಿಕ್ | Photo: PTI
ನ್ಯೂಯಾರ್ಕ್: ಮೊದಲೆರಡು ಸೆಟ್ಗಳ ಸೋಲಿನಿಂದ ಬೇಗನೆ ಚೇತರಿಸಿಕೊಂಡ ಸರ್ಬಿಯದ ಸೂಪರ್ಸ್ಟಾರ್ ನೊವಾಕ್ ಜೊಕೊವಿಕ್ ಯು.ಎಸ್.ಓಪನ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ತಲುಪಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ನ ಮೂರನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಎದುರಾಳಿ ಲಾಸ್ಲೊ ಜೆರೆ ವಿರುದ್ಧ 4-6, 4-6, 6-1, 6-1, 6-3 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು. 2006ರ ನಂತರ ಟೂರ್ನಿಯಿಂದ ಬೇಗನೆ ನಿರ್ಗಮಿಸುವ ಅಪಾಯದಿಂದ ಪಾರಾದರು.
ಜೊಕೊವಿಕ್ ವೃತ್ತಿಜೀವನದಲ್ಲಿ ಪಂದ್ಯದ ಮೊದಲೆರಡು ಸೆಟ್ಗಳಲ್ಲಿ ಸೋತ ನಂತರ 8ನೇ ಬಾರಿ ಜಯ ದಾಖಲಿಸಿದರು. ಐದು ಸೆಟ್ಗಳ ಪಂದ್ಯಗಳಲ್ಲಿ ತನ್ನ ದಾಖಲೆಯನ್ನು 38-11ರಿಂದ ಉತ್ತಮಪಡಿಸಿಕೊಂಡಿದ್ದಾರೆ.
ಜೊಕೊವಿಕ್ ಪುರುಷರ ಸಿಂಗಲ್ಸ್ನಲ್ಲಿ ಗೆದ್ದಿರುವ ದಾಖಲೆಯ 23 ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳ ಪೈಕಿ ಕೇವಲ 3 ಪ್ರಶಸ್ತಿಗಳನ್ನು ಯು.ಎಸ್.ಓಪನ್ನಲ್ಲಿ ಗೆದ್ದಿದ್ದಾರೆ. ಆರು ಬಾರಿ ರನ್ನರ್ಸ್ ಅಪ್ ಆಗಿದ್ದಾರೆ. ಕೋವಿಡ್-19 ವಿರುದ್ಧ ಲಸಿಕೆ ಸ್ವೀಕರಿಸದ ಕಾರಣ ಜೊಕೊವಿಕ್ ಕಳೆದ ವರ್ಷ ಯು.ಎಸ್. ಓಪನ್ನಲ್ಲಿ ಸ್ಪರ್ಧಿಸಿರಲಿಲ್ಲ. ಲಸಿಕೆ ಹಾಕಿಸಿಕೊಳ್ಳದ ವಿದೇಶಿಗರಿಗೆ ಅಮೆರಿಕ ಪ್ರವೇಶಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ಈ ವರ್ಷ ಮೇನಲ್ಲಿ ಹಿಂಪಡೆಯಲಾಗಿದೆ.
32ನೇ ಶ್ರೇಯಾಂಕದ ಲಾಸ್ಲೊ ಜೆರೆ ಮೊದಲ ಬಾರಿ ಪ್ರಮುಖ ಟೂರ್ನಮೆಂಟ್ನಲ್ಲಿ ನಾಲ್ಕನೇ ಸುತ್ತು ತಲುಪಲು ಪ್ರಯತ್ನಿಸಿದ್ದಾರೆ.
ಲಾಸ್ಲೊ ಹಾಗೂ ಜೊಕೊವಿಕ್ ಸರ್ಬಿಯ ದೇಶದವರಾಗಿದ್ದು ಪರಸ್ಪರ ಚಿರಪರಿಚಿತರು. ಇಬ್ಬರು ಒಟ್ಟಿಗೆ ಅಭ್ಯಾಸ ಮಾಡುತ್ತಾರೆ, ಡಬಲ್ಸ್ ಪಂದ್ಯದಲ್ಲಿ ಹಾಗೂ ಡೇವಿಸ್ ಕಪ್ ಟೂರ್ನಮೆಂಟ್ಗಳಲ್ಲಿ ಒಟ್ಟಿಗೆ ಆಡುತ್ತಾರೆ.