ಯುಎಸ್ ಓಪನ್: ಹಾಲಿ ಚಾಂಪಿಯನ್ ಅಲ್ಕರಾಝ್ಗೆ ಸೋಲುಣಿಸಿ ಫೈನಲ್ ತಲುಪಿದ ಮೆಡ್ವೆಡೆವ್; ಜೊಕೊವಿಕ್ ಎದುರಾಳಿ
ಡೇನಿಯಲ್ ಮೆಡ್ವೆಡೆವ್ Photo: twitter/@DaniilMedwed
ನ್ಯೂಯಾರ್ಕ್: ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ರನ್ನು ಪುರುಷರ ಸಿಂಗಲ್ಸ್ ಸೆಮಿ ಫೈನಲ್ನಲ್ಲಿ 7-6(3), 6-1, 3-6, 6-3 ಸೆಟ್ಗಳ ಅಂತರದಿಂದ ಮಣಿಸಿದ ರಶ್ಯದ ಆಟಗಾರ ಡೇನಿಯಲ್ ಮೆಡ್ವೆಡೆವ್ ಯು.ಎಸ್. ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ಗೆ ಪ್ರವೇಶಿಸಿದ್ದಾರೆ.
ರವಿವಾರ ನಡೆಯಲಿರುವ ಪುರುಷರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಮೂರು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ರನ್ನು ಎದುರಿಸಲಿದ್ದಾರೆ. ಜೊಕೊವಿಕ್ ಯು.ಎಸ್. ಓಪನ್ನಲ್ಲಿ ನಾಲ್ಕನೇ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.
ಜೊಕೊವಿಕ್ ಹಾಗೂ ಮೆಡ್ವೆಡೆವ್ 2021ರ ಯು.ಎಸ್. ಓಪನ್ನಲ್ಲಿ ಕೊನೆಯ ಬಾರಿ ಸೆಣಸಾಡಿದ್ದರು. ಆಗ ಜೊಕೊವಿಕ್ಗೆ ಸೋಲುಣಿಸಿದ್ದ ಮೆಡ್ವೆಡೆವ್ ವೃತ್ತಿಜೀವನದ ಮೊದಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಕ್ಯಾಲೆಂಡರ್ ವರ್ಷದಲ್ಲಿ ಎಲ್ಲ 4 ಪ್ರಶಸ್ತಿಗಳನ್ನು ಗೆಲ್ಲುವ ಅಪರೂಪದ ದಾಖಲೆ ಮಾಡುವ ಜೊಕೊವಿಕ್ರ ಕನಸನ್ನು ಭಗ್ನಗೊಳಿಸಿದ್ದರು. ಇದೀಗ ಜೊಕೊವಿಕ್ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
10ನೇ ಬಾರಿ ಯುಎಸ್ ಓಪನ್ ಫೈನಲ್ ತಲುಪಿದ ಜೊಕೊವಿಕ್:
ಇದೇ ವೇಳೆ ಮತ್ತೊಂದು ಪುರುಷರ ಸಿಂಗಲ್ಸ್ ಸೆಮಿ ಫೈನಲ್ನಲ್ಲಿ ಅಮೆರಿಕದ ಬೆನ್ ಶೆಲ್ಟನ್ರನ್ನು 6-3, 6-2, 7-6(4) ಸೆಟ್ಗಳ ಅಂತರದಿಂದ ಮಣಿಸಿದ ಸರ್ಬಿಯದ ಸೂಪರ್ಸ್ಟಾರ್ ನೊವಾಕ್ ಜೊಕೊವಿಕ್ 10ನೇ ಬಾರಿ ಯು.ಎಸ್. ಓಪನ್ ಫೈನಲ್ ತಲುಪಿದ್ದಾರೆ.
36ರ ಹರೆಯದ ಜೊಕೊವಿಕ್ ತನ್ನ ಅನುಭವದ ಬಲದಿಂದ ಅಮೆರಿಕದ ಯುವ ಆಟಗಾರನನ್ನು ಸುಲಭವಾಗಿ ಸೋಲಿಸಿದರು.
ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನಕ್ಕೆ ವಾಪಸಾಗುವುದನ್ನು ಈಗಾಗಲೇ ಖಚಿತಪಡಿಸಿರುವ ಜೊಕೊವಿಕ್ 24ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಬೇಟೆಯಲ್ಲಿದ್ದಾರೆ. ರವಿವಾರ ಈ ಸಾಧನೆ ಮಾಡಿದರೆ ಮಾರ್ಗರೆಟ್ ಕೋರ್ಟ್ ಅವರ ಸಾರ್ವಕಾಲಿಕ ಸಿಂಗಲ್ಸ್ ಪ್ರಶಸ್ತಿ ದಾಖಲೆ ಸರಿಗಟ್ಟಲಿದ್ದಾರೆ.