ಅಮೆರಿಕ- ಐರ್ಲೆಂಡ್ ಪಂದ್ಯ ರದ್ದು: ವಿಶ್ವಕಪ್ ನಿಂದ ಪಾಕಿಸ್ತಾನ ಔಟ್
PC: X/ AjayJadeja171
ನ್ಯೂಯಾರ್ಕ್: ಅಮೆರಿಕ ಮತ್ತು ಐರ್ಲೆಂಡ್ ನಡುವಿನ ಟಿ20 ವಿಶ್ವಕಪ್ ಪಂದ್ಯಾವಳಿಯ ಎ ಗುಂಪಿನ ಪಂದ್ಯ ಶುಕ್ರವಾರ ಮಳೆಯ ಕಾರಣದಿಂದ ರದ್ದಾಗಿದ್ದು, ಉಭಯ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿವೆ. ಇದರೊಂದಿಗೆ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಅಮೆರಿಕ ತಂಡ ಸೂಪರ್ 8 ಹಂತಕ್ಕೆ ಮುನ್ನಡೆದಿದೆ. ಇದರಿಂದಾಗಿ ಟೂರ್ನಿಯಲ್ಲಿ ಎರಡು ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ಟೂರ್ನಿಯಿಂದ ನಿರ್ಗಮಿಸಿದೆ.
ಸಹ ತಂಡವೊಂದು ಗುಂಪು ಹಂತದಿಂದ ಸೂಪರ್ ಹಂತಕ್ಕೆ (8/10/12) ಮುನ್ನಡೆಯುತ್ತಿರುವ ಏಳನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ ಟಿ20 ವಿಶ್ವಕಪ್ ನಲ್ಲಿ ಐರ್ಲೆಂಡ್ (2009), ನೆದರ್ಲೆಂಡ್ಸ್ (2014), ಅಫ್ಘಾನಿಸ್ತಾನ (2016), ನಮೀಬಿಯಾ (2021), ಸ್ಕಾಟ್ಲೆಂಡ್ (2021) ಮತ್ತು ನೆದರ್ಲೆಂಡ್ಸ್ (2022) ಸೂಪರ್ ಹಂತಕ್ಕೆ ಮುನ್ನಡೆದಿದ್ದವು.
ಗುಂಪು ಹಂತದ ಎಲ್ಲ ನಾಲ್ಕು ಪಂದ್ಯಗಳನ್ನು ಮುಗಿಸಿರುವ ಅಮೆರಿಕ ಎರಡು ಜಯ, ಒಂದು ಸೋಲು ಮತ್ತು ಒಂದು ಪಂದ್ಯ ರದ್ದಾಗಿರುವ ಕಾರಣ ಒಟ್ಟು ಐದು ಅಂಕಗಳನ್ನು ಸಂಪಾದಿಸಿ, ಎ ಗುಂಪಿನಿಂದ 2ನೇ ತಂಡವಾಗಿ ಸೂಪರ್ 8 ಹಂತ ತಲುಪಿದೆ. ಅಗ್ರಸ್ಥಾನಿಯಾಗಿರುವ ಭಾರತ ಈಗಾಗಲೇ ಮುಂದಿನ ಹಂತಕ್ಕೆ ತೇರ್ಗಡೆಯಾಗಿದೆ.
ಮೂರು ಪಂದ್ಯಗಳಲ್ಲಿ 1 ಗೆಲುವು ಹಾಗೂ 2 ಸೋಲಿನೊಂದಿಗೆ ಪಾಕಿಸ್ತಾನ ಟೂರ್ನಿಯಿಂದ ನಿರ್ಗಮಿಸಿದೆ. ಪಾಕಿಸ್ತಾನಕ್ಕೆ ಗುಂಪು ಹಂತದ ಕೊನೆಯ ಪಂದ್ಯ ಬಾಕಿ ಇದ್ದರೂ, ಇದು ಕೇವಲ ಔಪಚಾರಿಕ ಎನಿಸಲಿದೆ.