ಪ್ರಜ್ಞಾನಂದ, ವಿದಿತ್ಗೆ ಗೆಲುವು; ಗುಕೇಶ್ಗೆ ಜಂಟಿ ಮುನ್ನಡೆ
ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿ
ಆರ್. ಪ್ರಜ್ಞಾನಂದ | PC : PTI
ಟೊರಾಂಟೊ: ಕೆನಡದ ಟೊರಾಂಟೊದಲ್ಲಿ ನಡೆಯುತ್ತಿರುವ ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯಲ್ಲಿ ಭಾರತೀಯ ಪುರುಷರ ತಂಡವು ಆರನೇ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದೆ. ಗ್ರಾಂಡ್ಮಾಸ್ಟರ್ ಆರ್. ಪ್ರಜ್ಞಾನಂದ ಮತ್ತು ವಿದಿತ್ ಗುಜರಾತಿ ಭವ್ಯ ಜಯ ಗಳಿಸಿದರೆ, ಡಿ. ಗುಕೇಶ್ ಡ್ರಾ ಸಾಧಿಸಿ ತನ್ನ ಜಂಟಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಪ್ರಜ್ಞಾನಂದ ಅಝರ್ಬೈಜಾನ್ನ ನಿಜತ್ ಅಬಸೊವ್ರನ್ನು ಸೋಲಿಸಿದರೆ, ಗುಜರಾತಿ ಫ್ರಾನ್ಸ್ನ ಅಲಿರೆಝರನ್ನು ಹಿಮ್ಮೆಟ್ಟಿಸಿದರು. ಅದೇ ವೇಳೆ, ಗುಕೇಶ್ ಅಮೆರಿಕದ ಹಿಕರು ನಕಮುರ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು. 17 ವರ್ಷದ ಗುಕೇಶ್ ಮತ್ತು ರಶ್ಯದ ಇಯಾನ್ ನೆಪೊಮ್ನಿಯಾಚಿ ಪುರುಷರ ವಿಭಾಗದಲ್ಲಿ ತಲಾ ನಾಲ್ಕು ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇನ್ನು ಎಂಟು ಸುತ್ತಿನ ಪಂದ್ಯಗಳು ಬಾಕಿಯಿವೆ.
ಫಿಡೆ ಧ್ವಜದಡಿ ಆಡುತ್ತಿರುವ ಇಯಾನ್ ನೆಪೊಮ್ನಿಯಾಚಿ, ಅಗ್ರ ಶ್ರೇಯಂಕದ ಅಮೆರಿಕದ ಫಬಿಯಾನೊ ಕರುವಾನ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು.
ಆದರೆ, ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ನಿರಾಶೆ ಕಾದಿತ್ತು. ಆರ್. ವೈಶಾಲಿ ರಶ್ಯದ ಕ್ಯಾಟರೀನಾ ಲಗ್ನೊ ವಿರುದ್ಧ ಸೋಲನುಭವಿಸಿದರು. ಪ್ರಜ್ಞಾನಂದರ ಸೋದರಿಯಾಗಿರುವ ವೈಶಾಲಿ ಪಂದ್ಯಾವಳಿಯಲ್ಲಿ ಸ್ಪರ್ಧೆಯಲ್ಲಿರಬೇಕಾದರೆ ಭಾರೀ ಪರಿಶ್ರಮ ಪಡಬೇಕಾದ ಅಗತ್ಯವಿದೆ.
ಅದೇ ವೇಳೆ, ಭಾರತದ ಕೊನೆರು ಹಂಪಿ ಕೂಡ ಚೀನಾದ ಟಿಂಗ್ಜೈ ಲೈ ವಿರುದ್ಧ ಸೋಲನುಭವಿಸಿದರು.
ಈಗ ಪ್ರಜ್ಞಾನಂದ 3.5 ಅಂಕಗಳೊಂದಿಗೆ ಫಬಿಯಾನೊ ಕರುವಾನ ಜೊತೆಗೆ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಅದೇ ವೇಳೆ, ಗುಜರಾತಿ ಮೂರು ಅಂಕಗಳೊಂದಿಗೆ ನಕಮುರ ಜೊತೆಗೆ ಐದನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.