ವಿಜಯ್ ಹಝಾರೆ ಟ್ರೋಫಿ | ಕೊನೆಯ ಓವರ್ನಲ್ಲಿ ಕರ್ನಾಟಕ ತಂಡಕ್ಕೆ ಜಯ
ದೇವದತ್ತ ಪಡಿಕ್ಕಲ್ ಶತಕ ; ಸೆಮಿ ಫೈನಲ್ಗೆ ಲಗ್ಗೆ
PC : PTI
ವಡೋದರ: ಕರ್ನಾಟಕ ಕ್ರಿಕೆಟ್ ತಂಡವು ಶನಿವಾರ ನಡೆದ ವಿಜಯ್ ಹಝಾರೆ ಟ್ರೋಫಿಯ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲಿನ ಭೀತಿಯಿಂದ ಹೊರ ಬಂದು ಬರೋಡಾ ತಂಡವನ್ನು ಕೊನೆಯ ಓವರ್ನಲ್ಲಿ 5 ರನ್ ಅಂತರದಿಂದ ರೋಚಕವಾಗಿ ಮಣಿಸಿದೆ. ಈ ಮೂಲಕ ಸೆಮಿ ಫೈನಲ್ಗೆ ಪ್ರವೇಶಿಸಿದೆ.
ಕರ್ನಾಟಕ ತಂಡವು ಜನವರಿ 15ರಂದು ನಡೆಯಲಿರುವ ಸೆಮಿ ಫೈನಲ್ನಲ್ಲಿ ಹರ್ಯಾಣ ಅಥವಾ ಗುಜರಾತ್ ತಂಡವನ್ನು ಎದುರಿಸಲಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ ತಂಡವು ದೇವದತ್ತ ಪಡಿಕ್ಕಲ್ ಶತಕದ(102 ರನ್, 99 ಎಸೆತ)ಸಹಾಯದಿಂದ ಬರೋಡಾ ತಂಡದ ಗೆಲುವಿಗೆ 282 ರನ್ ಗುರಿ ನೀಡಿತು.
ಗೆಲ್ಲಲು ಸವಾಲಿನ ಮೊತ್ತ ಬೆನ್ನಟ್ಟಿದ ಬರೋಡಾ ತಂಡಕ್ಕೆ ಕೊನೆಯ ಓವರ್ನಲ್ಲಿ ಗೆಲುವಿಗೆ 13 ರನ್ ಅಗತ್ಯವಿತ್ತು. ಕೊನೆಯ ಓವರ್ನಲ್ಲಿ ಬಿಗಿ ಬೌಲಿಂಗ್ ಮಾಡಿದ ಕುಂದಾಪುರದ ಕುವರ ಅಭಿಲಾಶ್ ಶೆಟ್ಟಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. 49.5 ಓವರ್ಗಳಲ್ಲಿ 276 ರನ್ಗೆ ಸರ್ವಪತನಗೊಂಡ ಬರೋಡಾ ತಂಡ ವೀರೋಚಿತ ಸೋಲುಂಡಿತು. ಆರಂಭಿಕ ಬ್ಯಾಟರ್ ಶಾಶ್ವತ್ ರಾವತ್ ಶತಕ(104 ರನ್, 126 ಎಸೆತ, 9 ಬೌಂಡರಿ,1 ಸಿಕ್ಸರ್)ವ್ಯರ್ಥವಾಯಿತು.
ರಾವತ್ ರಲ್ಲದೆ ಅತಿತ್ ಶೇಟ್(56 ರನ್, 59 ಎಸೆತ)ಅರ್ಧಶತಕದ ಕೊಡುಗೆ ನೀಡಿ ಗೆಲುವಿಗಾಗಿ ಹೋರಾಟ ನೀಡಿದರು.
ಬರೋಡಾ ತಂಡವು 31 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆಗ 2ನೇ ವಿಕೆಟ್ಗೆ 99 ರನ್ ಜೊತೆಯಾಟ ನಡೆಸಿದ ರಾವತ್ ಹಾಗೂ ಅತಿತ್ ತಂಡವನ್ನು ಆಧರಿಸಿದರು.
ಈ ಜೋಡಿ ಬೇರ್ಪಟ್ಟ ನಂತರ ನಾಯಕ ಕೃನಾಲ್ ಪಾಂಡ್ಯ(30 ರನ್, 28 ಎಸೆತ)ಹಾಗೂ ರಾವತ್ 3ನೇ ವಿಕೆಟ್ನಲ್ಲಿ 55 ರನ್ ಸೇರಿಸಿ ತಂಡವನ್ನು ಗೆಲುವಿನ ಹಾದಿಯಲ್ಲಿರಿಸಿದರು.
34ನೇ ಓವರ್ ನಲ್ಲಿ 2 ವಿಕೆಟ್ಗೆ 185 ರನ್ ಗಳಿಸಿದ್ದ ಬರೋಡಾ ತಂಡವು 16 ರನ್ ಸೇರಿಸುವಷ್ಟರಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡು ಕರ್ನಾಟಕ ತಂಡ ಮರು ಹೋರಾಡಲು ಅವಕಾಶ ನೀಡಿತು.
ಕೃನಾಲ್ ಹಾಗೂ ವಿಷ್ಣು ಸೋಲಂಕಿ(1 ರನ್)ಬೆನ್ನುಬೆನ್ನಿಗೆ ಔಟಾದರು. ಬರೋಡಾ ತಂಡವು ಒಂದು ಹಂತದಲ್ಲಿ 5 ವಿಕೆಟ್ಗಳ ನಷ್ಟಕ್ಕೆ 201 ರನ್ ಗಳಿಸಿತ್ತು. ಆದರೆ 276 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಶತಕವೀರ ಶಾಶ್ವತ್ ಕ್ರೀಸ್ನಲ್ಲಿರುವ ತನಕ ಬರೋಡಾ ತಂಡ ಗೆಲುವಿನ ವಿಶ್ವಾಸದಲ್ಲಿತ್ತು. ಶಾಶ್ವತ್ 47ನೇ ಓವರ್ನಲ್ಲಿ ಔಟಾದಾಗ ಬರೋಡಾ ತಂಡ ಸೋಲಿನ ಸುಳಿಗೆ ಸಿಲುಕಿತು.
ಕಳೆದ ತಿಂಗಳು 51 ಎಸೆತಗಳಲ್ಲಿ 134 ರನ್ ಗಳಿಸಿ ಬರೋಡಾ ತಂಡ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರ್ ಗಳಿಸಲು ನೆರವಾಗಿದ್ದ ಭಾನು ಪನಿಯಾ(22 ರನ್) ಹಾಗೂ ರಾವತ್ 3 ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು.
ಭಾರ್ಗವ್ ಭಟ್ ಹಾಗೂ ರಾಜ್ ಲಿಂಬಾನಿ ಸಾಂದರ್ಭಿಕ ಬೌಂಡರಿ ಗಳಿಸಿ ತಂಡವನ್ನು ಗೆಲುವಿನ ಸನಿಹ ತಲುಪಿಸಿದರು. ಬರೋಡಾಕ್ಕೆ 6 ಎಸೆತಗಳಲ್ಲಿ ಗೆಲ್ಲಲು 13 ರನ್ ಬೇಕಾಗಿತ್ತು. ಎಡಗೈ ವೇಗಿ ಅಭಿಲಾಶ್ ಯಾವುದೇ ಒತ್ತಡಕ್ಕೆ ಒಳಗಾಗದೆ ಕೊನೆಯ ಓವರ್ ಬೌಲಿಂಗ್ ಮಾಡಿದರು. ಕೊನೆಯ 2 ಎಸೆತಗಳಲ್ಲಿ ಬರೋಡಾಕ್ಕೆ 8 ರನ್ ಅಗತ್ಯವಿತ್ತು. ಭಾರ್ಗವ್ ಅವರನ್ನು ಸ್ಮರಣ್ ರನೌಟ್ ಮಾಡಿ ರೋಚಕ ಗೆಲುವಿಗೆ ತನ್ನದೇ ಆದ ಕೊಡುಗೆ ನೀಡಿದರು.
ಕರ್ನಾಟಕದ ಬೌಲಿಂಗ್ ವಿಭಾಗದಲ್ಲಿ ಶ್ರೇಯಸ್ ಗೋಪಾಲ್(2-38), ವಾಸುಕಿ ಕೌಶಿಕ್(2-39), ಪ್ರಸಿದ್ಧ ಕೃಷ್ಣ(2-60) ಹಾಗೂ ಅಭಿಲಾಶ್ ಶೆಟ್ಟಿ(2-70) ತಲಾ ಎರಡು ವಿಕೆಟ್ಗಳನ್ನು ಕಬಳಿಸಿ ಕರ್ನಾಟಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
*ದೇವದತ್ತ ಪಡಿಕ್ಕಲ್ ಶತಕ, ಕರ್ನಾಟಕ 281/8
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕರ್ನಾಟಕ ತಂಡವು ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 281 ರನ್ ಗಳಿಸಿತು.
ಕರ್ನಾಟಕ ತಂಡವು ನಾಯಕ ಮಯಾಂಕ್ ಅಗರ್ವಾಲ್(6 ರನ್)ವಿಕೆಟನ್ನು 4.5 ಓವರ್ಗಳಲ್ಲಿ 30 ರನ್ ಗಳಿಸುವಷ್ಟರಲ್ಲಿ ಕಳೆದುಕೊಂಡಿತು. ಆಗ ತಂಡಕ್ಕೆ ಆಸರೆಯಾದ ದೇವದತ್ತ ಪಡಿಕ್ಕಲ್(102 ರನ್, 99 ಎಸೆತ)ಹಾಗೂ ಕೆ.ವಿ. ಅನೀಶ್(52 ರನ್, 64 ಎಸೆತ, 4 ಬೌಂಡರಿ, 1 ಸಿಕ್ಸರ್)ಎರಡನೇ ವಿಕೆಟ್ಗೆ 133 ರನ್ ಜೊತೆಯಾಟ ನಡೆಸಿದರು.
ಅನೀಶ್ ವಿಕೆಟನ್ನು ಪಡೆದ ರಾಜ್ ಲಿಂಬಾನಿ(3-47)ಈ ಜೋಡಿಯನ್ನು ಬೇರ್ಪಡಿಸಿದರು. ಪಡಿಕ್ಕಲ್ ಔಟಾದಾಗ ಕರ್ನಾಟಕ ತಂಡದ ಸ್ಕೋರ್ 172ಕ್ಕೆ 3.
ಆರ್. ಸ್ಮರಣ್(28 ರನ್), ಕೆ. ಶ್ರೀಜಿತ್(28 ರನ್), ಅಭಿನವ್ ಮನೋಹರ್(21 ರನ್) ತಂಡದ ಮೊತ್ತವನ್ನು 281ಕ್ಕೆ ತಲುಪಿಸಿದರು.
ಬರೋಡಾದ ಪರ ಅತಿತ್ ಶೇಟ್(3-41) ಹಾಗೂ ರಾಜ್ ಲಿಂಬಾನಿ(3-47)ತಲಾ ಮೂರು ವಿಕೆಟ್ಗಳನ್ನು ಪಡೆದರು.