ವಿಜಯ್ ಹಝಾರೆ ಟ್ರೋಫಿ ನಾಕೌಟ್ ಪಂದ್ಯ | ಪ್ರಸಿದ್ಧ್ ಕೃಷ್ಣ, ದೇವದತ್ತ ಪಡಿಕ್ಕಲ್, ಸುಂದರ್ ಲಭ್ಯ
ಪ್ರಸಿದ್ಧ್ ಕೃಷ್ಣ | PC : PTI
ಹೊಸದಿಲ್ಲಿ: ಕರ್ನಾಟಕದ ಕ್ರಿಕೆಟಿಗರಾದ ಪ್ರಸಿದ್ಧ ಕೃಷ್ಣ ಹಾಗೂ ದೇವದತ್ತ ಪಡಿಕ್ಕಲ್, ತಮಿಳುನಾಡಿನ ವಾಶಿಂಗ್ಟನ್ ಸುಂದರ್ ವಡೋದರದಲ್ಲಿ ಗುರುವಾರ ಆರಂಭವಾಗಲಿರುವ ವಿಜಯ್ ಹಝಾರೆ ಟ್ರೋಫಿಯ ನಾಕೌಟ್ ಪಂದ್ಯಗಳಿಗೆ ಲಭ್ಯ ಇರಲಿದ್ದಾರೆ. ದೇವದತ್ತ, ಕೃಷ್ಣ ಹಾಗೂ ಸುಂದರ್ ಆಸ್ಟ್ರೇಲಿಯದಲ್ಲಿ ನಡೆದಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡಿದ್ದರು.
ಆಸ್ಟ್ರೇಲಿಯದ ವಿರುದ್ಧ ಎಲ್ಲ 5 ಪಂದ್ಯಗಳಲ್ಲಿ ಭಾಗವಹಿಸಿದ್ದ ಕೆ.ಎಲ್.ರಾಹುಲ್ ವಿಶ್ರಾಂತಿ ಪಡೆದಿದ್ದು, ವಿಜಯ್ ಹಝಾರೆ ಟ್ರೋಫಿಯ ನಾಕೌಟ್ ಹಂತದಲ್ಲಿ ಆಡುವುದಿಲ್ಲ.
ಜನವರಿ 23ರಿಂದ ಆರಂಭವಾಗಲಿರುವ ಎರಡನೇ ಹಂತದ ರಣಜಿ ಟ್ರೋಫಿಯಲ್ಲಿ ರಾಹುಲ್ ಭಾಗವಹಿಸುವ ಬಗ್ಗೆ ತರುವಾಯ ನಿರ್ಧರಿಸಲಾಗುತ್ತದೆ.
ದೇಶೀಯ ಕೆಂಪು ಚೆಂಡಿನ ಸ್ಪರ್ಧಾವಳಿಯ ಇನ್ನುಳಿದ ಪಂದ್ಯಗಳಲ್ಲಿ ಭಾರತದ ಪ್ರಮುಖ ಆಟಗಾರರು ಭಾಗವಹಿಸಬೇಕು ಎಂದು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಇತ್ತೀಚೆಗೆ ಸಲಹೆ ನೀಡಿದ್ದರು.
ಸುಂದರ್ ಅವರು ತಮಿಳುನಾಡು ತಂಡದ ಪರ ಆಡುವುದು ಅ ತಂಡವು ಸೆಮಿ ಫೈನಲ್ ತಲುಪುವುದನ್ನು ಅವಲಂಭಿಸಿದೆ.
ಆಸೀಸ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಸುಂದರ್ ಅರ್ಧಶತಕ ಸಹಿತ ಒಟ್ಟು 114 ರನ್ ಗಳಿಸಿದ್ದರು. ಆದರೆ ಹೆಚ್ಚು ಬೌಲಿಂಗ್ ಮಾಡುವ ಅವಕಾಶ ಪಡೆದಿರಲಿಲ್ಲ. 37 ಓವರ್ಗಳ ಬೌಲಿಂಗ್ ಮಾಡಿದ್ದ ಸುಂದರ್ ವೇಗದ ಬೌಲಿಂಗ್ ಸ್ನೇಹಿ ಪಿಚ್ನಲ್ಲಿ 3 ವಿಕೆಟ್ಗಳನ್ನು ಪಡೆದಿದ್ದರು.
ಪ್ರಸಿದ್ಧ ಕೃಷ್ಣ ಸಿಡ್ನಿಯಲ್ಲಿ ನಡೆದಿದ್ದ 5ನೇ ಟೆಸ್ಟ್ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ವೇಗದ ಬೌಲರ್ ಕೃಷ್ಣ ಆಸ್ಟ್ರೇಲಿಯದ 6 ವಿಕೆಟ್ಗಳನ್ನು ಉರುಳಿಸಿದ್ದರು. ಮೊದಲ ಇನಿಂಗ್ಸ್ನಲ್ಲಿ 42 ರನ್ ಗೆ 3 ಹಾಗೂ 2ನೇ ಇನಿಂಗ್ಸ್ನಲ್ಲಿ 65 ರನ್ಗೆ 3 ವಿಕೆಟ್ಗಳನ್ನು ಪಡೆದಿದ್ದರು.
ದೇವದತ್ತ ಪಡಿಕ್ಕಲ್ ಅವರು ಪರ್ತ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾರ ಅನುಪಸ್ಥಿತಿಯಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ 0 ಹಾಗೂ 2ನೇ ಇನಿಂಗ್ಸ್ನಲ್ಲಿ 25 ರನ್ ಗಳಿಸಿದ್ದರು. ಸರಣಿಯ ಉಳಿದ 4 ಟೆಸ್ಟ್ ಪಂದ್ಯಗಳಲ್ಲಿ ಆಡಿಲ್ಲ.
ಪ್ರಸಿದ್ದ ಕೃಷ್ಣ ಹಾಗೂ ದೇವದತ್ತ ಜನವರಿ 10ರಂದು ಕರ್ನಾಟಕ ತಂಡವನ್ನು ಸೇರ್ಪಡೆಯಾಗುವ ಸಾಧ್ಯತೆಯಿದೆ. ವಡೋದರದಲ್ಲಿ ಕರ್ನಾಟಕ ತಂಡವು ಕ್ವಾರ್ಟರ್ ಫೈನಲ್ನಲ್ಲಿ ಬರೋಡಾ ತಂಡವನ್ನು ಎದುರಿಸಲಿದೆ.
ಆಸ್ಟ್ರೇಲಿಯದಿಂದ ಬುಧವಾರ ವಾಪಸಾಗಿರುವ ನಿತೀಶ್ ಕುಮಾರ್ ರೆಡ್ಡಿ ಆಂಧ್ರ ತಂಡ ನಾಕೌಟ್ ಹಂತ ತಲುಪುವಲ್ಲಿ ವಿಫಲವಾದ ಕಾರಣ ಟೂರ್ನಿಯಲ್ಲಿ ತಕ್ಷಣವೇ ಭಾಗವಹಿಸುವುದಿಲ್ಲ.
ಆಸ್ಟ್ರೇಲಿಯದಲ್ಲಿ ಒಂದು ಶತಕವನ್ನು ಸಿಡಿಸಿ ತನ್ನ ಬ್ಯಾಟಿಂಗ್ನಲ್ಲಿ ಮಿಂಚಿದ್ದ ನಿತೀಶ್ ಅವರು ರಣಜಿ ಟ್ರೋಫಿಯ ಎರಡನೇ ಹಂತದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಆಂಧ್ರ ರಣಜಿ ತಂಡವು ಜ.23ರಿಂದ ಪುದುಚೇರಿ ಹಾಗೂ ಜ.30ರಿಂದ ರಾಜಸ್ಥಾನದ ವಿರುದ್ಧ ಉಳಿದೆರಡು ಪಂದ್ಯಗಳನ್ನು ಆಡಲಿದೆ.