ಕ್ರೀಡಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸದಿರಲು ವಿನೇಶ್ ಫೋಗಟ್ ನಿರ್ಧರಿಸಿದ್ದರು: ವಕೀಲ ಹರೀಶ್ ಸಾಳ್ವೆ
ಹರೀಶ್ ಸಾಳ್ವೆ(PC: X \ @harishsalvee) , ವಿನೇಶ್ ಫೋಗಟ್ (PTI)
ಹೊಸ ದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ತನ್ನ ಅನರ್ಹತೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದಾಗ ಭಾರತೀಯ ಒಲಿಂಪಿಕ್ ಒಕ್ಕೂಟದಿಂದ ನನಗೆ ಸೂಕ್ತ ನೆರವು ದೊರೆಯಲಿಲ್ಲ ಎಂಬ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರ ಆರೋಪಕ್ಕೆ ತಿರುಗೇಟು ನೀಡಿರುವ ವಕೀಲ ಹರೀಶ್ ಸಾಳ್ವೆ, ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸದಿರಲು ಅವರು ನಿರ್ಧರಿಸಿದ್ದರು ಎಂದು ಹೇಳಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ವಿನೇಶ್ ಫೋಗಟ್ ಪರ ಕಾನೂನಾತ್ಮಕ ಪ್ರಾತಿನಿಧಿಕತೆ ಹಾಗೂ ಸಮನ್ವಯದ ಕೊರತೆ ಎರಡೂ ಉಂಟಾಗಿತ್ತು ಎಂದೂ ಅವರು ಹೇಳಿದ್ದಾರೆ.
50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ತಮ್ಮನ್ನು ಜಂಟಿ ಬೆಳ್ಳಿ ಪದಕ ವಿಜೇತೆ ಎಂದು ಘೋಷಿಸಬೇಕು ಎಂದು ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ್ದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರ್ಧಾರವನ್ನು ಎತ್ತಿ ಹಿಡಿದಿತ್ತು.
ವಿನೇಶ್ ಫೋಗಟ್ ಅವರು ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದುದರಿಂದ ಅವರನ್ನು 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್ ನಿಂದ ಅನರ್ಹಗೊಳಿಸಲಾಗಿತ್ತು. ಹೀಗಾಗಿ ಫೈನಲ್ ಪಂದ್ಯದಿಂದ ಹೊರ ಬಿದ್ದಿದ್ದ ವಿನೇಶ್ ಫೋಗಟ್, ಕೊನೆಯ ಸ್ಥಾನಕ್ಕೆ ನೂಕಲ್ಪಟ್ಟಿದ್ದರು. ಇದನ್ನು ಪ್ರಶ್ನಿಸಿ, ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ ಭಾರತೀಯ ಒಲಿಂಪಿಕ್ ಒಕ್ಕೂಟದ ಪರವಾಗಿ ಹರೀಶ್ ಸಾಳ್ವೆ ಪ್ರತಿನಿಧಿಸಿದ್ದರು.
ಆದರೆ, ಒಂದು ವಾರ ಕಾಲ ನಡೆದ ಸುದೀರ್ಘ ವಿಚಾರಣೆಯ ನಂತರ, ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರ್ಧಾರವನ್ನು ಎತ್ತಿ ಹಿಡಿದಿತ್ತು. ಇದರಿಂದಾಗಿ, ವಿನೇಶ್ ಫೋಗಟ್ ಖಾಲಿ ಕೈಯಲ್ಲಿ ಭಾರತಕ್ಕೆ ಮರಳುವಂತಾಗಿತ್ತು.