ಒಲಿಂಪಿಕ್ ಹಿನ್ನಡೆಯ ನಂತರ ನನಗೆ ಯಾರೂ ಕರೆಯನ್ನೂ ಮಾಡಿಲ್ಲ: ವಿನೇಶ್ ಫೋಗಟ್ ಬೇಸರ
ವಿನೇಶ್ ಫೋಗಟ್ | PC : X \ @Phogat_Vinesh
ಹೊಸದಿಲ್ಲಿ: “ಒಲಿಂಪಿಕ್ ವೈಫಲ್ಯದ ನಂತರ ನನಗೆ ಯಾರಿಂದಲೂ ನೆರವು ದೊರೆತಿಲ್ಲ. ನನಗೆ ಯಾರೂ ಕರೆಯನ್ನೂ ಮಾಡಿಲ್ಲ” ಎಂದು ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತೀಯ ಒಲಿಂಪಿಕ್ ಸಮಿತಿಯ ಮುಖ್ಯಸ್ಥೆ ಪಿ.ಟಿ.ಉಷಾ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ವಿನೇಶ್ ಫೋಗಟ್, ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ಸಮಿತಿಯ ವರದಿಗಳು ಏನಾದವು ಎಂದು ಪ್ರಶ್ನಿಸಿದ್ದಾರೆ.
“ನನಗೆ ಯಾರೂ ಕರೆ ಮಾಡಿಲ್ಲ. ನಾನು ನನ್ನ ಬಾಲ್ಯದ ದಿನಗಳಲ್ಲಿ ಪಿ.ಟಿ.ಉಷಾ ಹಾರುವ ಜಿಂಕೆ ಎಂಬ ಮಾತನ್ನು ಕೇಳಿದ್ದೆ. ಅವರನ್ನು ಎಲ್ಲರು ಬಲ್ಲರೂ ಕೂಡಾ. ನಮ್ಮ ಪ್ರತಿಭಟನೆಯ ಸಂದರ್ಭದಲ್ಲಿ ಅವರು ರಚಿಸಿದ್ದ ಸಮಿತಿಯ ವರದಿಗಳೇನಾದವು? ಈ ದಿನದವರೆಗೂ ಆ ವರದಿಗಳಿಗೆ ಏನಾದವು ಎಂಬುದರ ಕುರಿತು ಯಾರಿಗೂ ತಿಳಿದಿಲ್ಲ. ಅಥ್ಲೀಟ್ ಗಳನ್ನು ರಕ್ಷಿಸುವ ಹೊಣೆಗಾರಿಕೆ ಆಕೆಯದ್ದಾಗಿದೆ” ಎಂದು India Today ಸುದ್ದಿ ಸಂಸ್ಥೆಯೊಂದಿನ ಮಾತುಕತೆಯಲ್ಲಿ ಅವರು ಹೇಳಿದ್ದಾರೆ.
“ನೀವು ಪದಕ ಗೆದ್ದಾಗ ಎಲ್ಲರೂ ನಿಮ್ಮೊಂದಿಗೆ ಭಾವಚಿತ್ರ ತೆಗೆಸಿಕೊಂಡು, ನಿಮ್ಮನ್ನು ಅಭಿನಂದಿಸುತ್ತಾರೆ. ಆದರೆ, ನಾನು ಫೈನಲ್ ತಲುಪುವವರೆಗೂ ಯಾರೂ ನನಗೆ ಕರೆ ಮಾಡಲಿಲ್ಲ. ಇದಾದ ನಂತರ, ನನ್ನನ್ನು ಬೆಂಬಲಿಸುವುದಾಗಿ ಕರೆಯೊಂದು ಬಂದಿತು. ಆದರೆ, ಆ ಕರೆಯ ಕುರಿತು ಸಾರ್ವಜನಿಕ ಊಹಾಪೋಹ ಸೃಷ್ಟಿಸುವುದು ನನಗೆ ಬೇಕಿರಲಿಲ್ಲ. ಅವರಿಗೆ ನನ್ನ ಬಗ್ಗೆ ನೈಜ ಕಾಳಜಿ ಇದ್ದಿದ್ದರೆ, ಅವರು ನನಗೆ ಸುಮ್ಮನೆ ಕರೆ ಮಾಡಿ, ನಾವು ನಿಮ್ಮೊಂದಿಗಿದ್ದೇವೆ ಎಂದಿದ್ದರೂ ಸಾಕಿತ್ತು. ಅದು ನನಗೆ ಸಾಕಷ್ಟಾಗುತ್ತಿತ್ತು” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50 ಕೆಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್, ಫೈನಲ್ ಪಂದ್ಯಕ್ಕೂ ಮುನ್ನ, ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರಿಂದ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದರು. ಇದು ತೀವ್ರ ವಿವಾದಕ್ಕೆ ಗುರಿಯಾಗಿತ್ತು.