ಅನರ್ಹತೆ ವಿರುದ್ಧ ವಿನೇಶ್ ಫೋಗಟ್ ಮೇಲ್ಮನವಿ | ಶನಿವಾರ ರಾತ್ರಿ ಸಿಎಎಸ್ ತೀರ್ಪು ಪ್ರಕಟ
ವಿನೇಶ್ ಫೋಗಟ್
ಹೊಸದಿಲ್ಲಿ : ಒಲಿಂಪಿಕ್ಸ್ ಫೈನಲ್ನಲ್ಲಿ ತನ್ನನ್ನು ಅನರ್ಹಗೊಳಿಸಿರುವುದರ ವಿರುದ್ಧ ಭಾರತೀಯ ಕುಸ್ತಿತಾರೆ ವಿನೇಶ್ ಫೋಗಟ್ ಸಲ್ಲಿಸಿರುವ ಮೇಲ್ಮನವಿಯ ಕುರಿತ ತೀರ್ಪನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ(ಸಿಎಎಸ್) ಅಡ್ಹಾಕ್ ವಿಭಾಗವು ಭಾರತದ ಕಾಲಮಾನ ಶನಿವಾರ ರಾತ್ರಿ 9:30ಕ್ಕೆ ಪ್ರಕಟಿಸಲಿದೆ ಎಂದು ಪಿಟಿಐ ವರದಿ ಮಾಡಿದೆ.
ಅಮೆರಿಕದ ಸಾರ್ಹಾ ಅನ್ ಹಿಲ್ಡರ್ಬ್ರಾಂಟ್ ವಿರುದ್ಧ ತನ್ನ ಫೈನಲ್ ಪಂದ್ಯಕ್ಕಿಂತ ಮೊದಲು ಬುಧವಾರ ಬೆಳಗ್ಗೆ 100 ಗ್ರಾಂ ತೂಕ ಹೆಚ್ಚಳವಾಗಿದ್ದಕ್ಕೆ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವಿನೇಶ್ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಾಲಯ ಸ್ವೀಕರಿಸಿದ್ದು, ಪ್ರಕರಣದ ವಿಚಾರಣೆಯು ಶುಕ್ರವಾರ ಕೊನೆಗೊಂಡಿದೆ.
ಪ್ಯಾರಿಸ್ ಕ್ರೀಡಾಕೂಟದ ಕೊನೆಯ ದಿನವಾದ ರವಿವಾರದೊಳಗೆ ತೀರ್ಪು ನೀಡಬೇಕೆಂದು ಒಲಿಂಪಿಕ್ಸ್ ಸಮಯದಲ್ಲಿ ವಿವಾದಗಳನ್ನು ಇತ್ಯರ್ಥಗೊಳಿಸಲು ಸ್ಥಾಪಿಸಲಾಗಿರುವ ತಾತ್ಕಾಲಿಕ ವಿಭಾಗವು ಹೇಳಿದ ನಂತರ ಸಿಎಎಸ್ ಹೇಳಿಕೆ ಬಂದಿದೆ.
ನಾವು ಸಕಾರಾತ್ಮಕ ನಿರ್ಣಯವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಹೇಳಿದೆ.
ಕುಸ್ತಿಪಟು ವಿನೇಶ್ ಫೋಗಟ್ ತನ್ನ ತೂಕ ಹೆಚ್ಚಳವಾಗಿದ್ದಕ್ಕೆ ಫೈನಲ್ ಪಂದ್ಯದಲ್ಲಿ ಆಡಲು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಕುರಿತು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ(ಸಿಎಎಸ್)ಅಡ್ಹಾಕ್ ವಿಭಾಗವು ಸಕಾರಾತ್ಮಕ ಪರಿಹಾರ ನೀಡಲಿದೆ ಎಂಬ ಭರವಸೆ ನನಗಿದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ವಿನೇಶ್ ಅವರು ಮಂಗಳವಾರ ನಡೆದ ಸೆಮಿ ಫೈನಲ್ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಝ್ಮನ್ ಲೋಪೆಝ್ರನ್ನು ಸೋಲಿಸಿ ಫೈನಲ್ಗೆ ಪ್ರವೇಶಿಸಿದ್ದರು. ಮಂಗಳವಾರ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದ ವಿನೇಶ್ ತನಗೆ ಲೋಪೆಝ್ರೊಂದಿಗೆ ಜಂಟಿ ಬೆಳ್ಳಿ ಪದಕ ನೀಡಬೇಕೆಂದು ಸಿಎಎಸ್ಗೆ ಮನವಿ ಮಾಡಿದ್ದಾರೆ.
ವಿನೇಶ್ ಪರವಾಗಿ ಹಿರಿಯ ವಕೀಲರಾದ ವಿದುಷ್ಪತ್ ಸಿಂಘಾನಿಯಾ ಹಾಗೂ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು.