"ಒಲಿಂಪಿಕ್ ಪದಕ ನಷ್ಟ ನನ್ನ ಬದುಕಿನ ʼಅತ್ಯಂತ ದೊಡ್ಡ ಗಾಯ’": ಕುಸ್ತಿ ಕಣಕ್ಕೆ ಮರಳುವ ಕುರಿತು ವಿನೇಶ್ ಫೋಗಟ್ ಹೇಳಿದ್ದೇನು?
ವಿನೇಶ್ ಫೋಗಟ್ (Photo: PTI)
ಹೊಸದಿಲ್ಲಿ: ಒಲಿಂಪಿಕ್ಸ್ನಲ್ಲಿ ಪದಕ ಕಳೆದುಕೊಂಡಿರುವುದು ನನ್ನ ಜೀವನದ ‘‘ಅತ್ಯಂತ ದೊಡ್ಡ ಗಾಯವಾಗಿದೆ’’ ಎಂದು ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಹೇಳಿದ್ದಾರೆ. ‘‘ಆದರೆ ನನ್ನ ಜನರ ಬೆಂಬಲವು ಈಗ ನನ್ನಲ್ಲಿ ಶಕ್ತಿ ತುಂಬಿದೆ’’ ಎಂದು ಅವರು ಘೋಷಿಸಿದ್ದಾರೆ.
ಪ್ಯಾರಿಸ್ನಿಂದ ಶನಿವಾರ ಭಾರತಕ್ಕೆ ಮರಳಿದ ಬಳಿಕ, ಶನಿವಾರ ತಡ ರಾತ್ರಿ ತನ್ನ ತವರು ಗ್ರಾಮ ಬಲಾಲಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
‘‘ನನಗೆ ನನ್ನ ಸಹ ಭಾರತೀಯರು, ನನ್ನ ಗ್ರಾಮಸ್ಥರು ಮತ್ತು ನನ್ನ ಕುಟುಂಬ ಸದಸ್ಯರ ಪ್ರೀತಿ ಸಿಕ್ಕಿದೆ. ಅದು ಈ ಗಾಯವನ್ನು ವಾಸಿ ಮಾಡುವಲ್ಲಿ ನನಗೆ ನೆರವು ನೀಡಲಿದೆ. ಬಹುಷಃ ನಾನು ಕುಸ್ತಿ ಕಣಕ್ಕೆ ಮರಳಬಹುದಾಗಿದೆ’’ ಎಂದು 29 ವರ್ಷದ ಫೋಗಟ್ ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಂಡ ಮರುದಿನ ಫೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದರು.
‘‘ಒಲಿಂಪಿಕ್ ಪದಕವನ್ನು ಕಳೆದುಕೊಂಡಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಗಾಯವಾಗಿದೆ. ಈ ಗಾಯ ವಾಸಿಯಾಗಲು ಎಷ್ಟು ಸಮಯ ಬೇಕಾಗಬಹುದು ಎನ್ನುವುದು ನನಗೆ ಗೊತ್ತಿಲ್ಲ. ನಾನು ಕುಸ್ತಿಯಲ್ಲಿ ಮುಂದುವರಿಯುತ್ತೇನೋ, ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಇಂದು ನಾನು ಪಡೆದಿರುವ ಧೈರ್ಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ನಾನು ಬಯಸಿದ್ದೇನೆ’’ ಎಂದು ಫೋಗಟ್ ಹೇಳಿದರು.
ಕುಸ್ತಿಯಲ್ಲಿ ನಾನು ಮಾಡಿರುವ ಸಾಧನೆಗಳನ್ನು ನನ್ನದೇ ಬಲಾಲಿ ಗ್ರಾಮದ ಯಾರಾದರೂ ಮೀರಿಸಬೇಕು ಎನ್ನುವುದು ನನ್ನ ಬಯಕೆಯಾಗಿದೆ ಎಂದು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಎರಡು ಬಾರಿ ಪದಕಗಳನ್ನು ಗೆದ್ದಿರುವ ಕುಸ್ತಿಪಟು ಹೇಳಿದರು.
‘‘ನನ್ನದೇ ಗ್ರಾಮದ ಯಾರಾದರೂ ನನ್ನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿ ನನ್ನ ದಾಖಲೆಗಳನ್ನು ಮುರಿಯಬೇಕು ಎಂದು ನಾನು ಹೃದಯಪೂರ್ವಕವಾಗಿ ಬಯಸುತ್ತೇನೆ. ನನ್ನದೇ ಗ್ರಾಮದ ಮಹಿಳಾ ಕುಸ್ತಿಪಟುಗಳನ್ನು ಮೇಲಕ್ಕೆ ತರಲು ನನಗೆ ಸಾಧ್ಯವಾದರೆ ಅದುವೇ ನನ್ನ ದೊಡ್ಡ ಸಾಧನೆಯಾಗುತ್ತದೆ’’ ಎಂದು ಅವರು ಹೇಳಿದರು.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕ ಕಳೆದುಕೊಂಡ ಹತಾಶೆಯೊಂದಿಗೆ ಫೋಗಟ್ ಶನಿವಾರ ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅವರನ್ನು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ ಪೂನಿಯ ಸೇರಿದಂತೆ ಭಾರೀ ಸಂಖ್ಯೆಯ ಅಭಿಮಾನಿಗಳು ಸ್ವಾಗತಿಸಿದರು. ಅವರನ್ನು ಸ್ವಾಗತಿಸಲು ಅವರ ಕುಟುಂಬ ಸದಸ್ಯರು, ಹಿತೈಷಿಗಳು, ರಾಜಕೀಯ ನಾಯಕರು ಮತ್ತು ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.
ಒಲಿಂಪಿಕ್ಸ್ನಲ್ಲಿ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿಯಲ್ಲಿ ವಿನೇಶ್ ಫೋಗಟ್ ಫೈನಲ್ ತಲುಪಿದ್ದರು. ಒಂದನೇ ದಿನದ ಸ್ಪರ್ಧೆಗೆ ಮುನ್ನ ನಡೆದ ತೂಕದಲ್ಲಿ ಅವರ ದೇಹ ತೂಕ ಪರಿಪೂರ್ಣವಾಗಿತ್ತು. ಅಂದು ಅವರು ಪ್ರಿಕ್ವಾರ್ಟರ್ ಫೈನಲ್, ಕ್ವಾರ್ಟರ್ಫೈನಲ್ ಮತ್ತು ಸೆಮಿಫೈನಲ್ಗಳಲ್ಲಿ ಜಯ ಗಳಿಸಿ ಮಾರನೇ ದಿನ ನಡೆಯಲಿರುವ ಫೈನಲ್ಗೆ ಅರ್ಹತೆ ಪಡೆದಿದ್ದರು. ಆದರೆ, ಮಾರನೇ ದಿನ ಫೈನಲ್ಗೆ ಮುನ್ನ ನಡೆದ ತೂಕದಲ್ಲಿ ಅವರ ದೇಹತೂಕ ನಿಗದಿತ ಮಿತಿಗಿಂತ 100 ಗ್ರಾಮ್ ಹೆಚ್ಚಾಗಿತ್ತು. ಹಾಗಾಗಿ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಕ್ರೀಡಾಕೂಟದಲ್ಲಿ ಅವರ ಸ್ಪರ್ಧೆಯನ್ನು ಅನರ್ಹಗೊಳಿಸಿತು ಮತ್ತು ಅವರಿಗೆ ಯಾವುದೇ ಪದಕವನ್ನು ನಿರಾಕರಿಸಿತು.
ಇದನ್ನು ಪ್ರಶ್ನಿಸಿ ಫೋಗಟ್ ಕ್ರೀಡಾ ಪಂಚಾಯಿತಿ ನ್ಯಾಯಾಲಯ (ಸಿಎಎಸ್)ಕ್ಕೆ ಮನವಿ ಸಲ್ಲಿಸಿದರು. ತನಗೆ ಜಂಟಿ ಬೆಳ್ಳಿ ಪದಕ ನೀಡುವಂತೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ನಿರ್ದೇಶನ ನೀಡುವಂತೆ ಅವರು ಕೋರಿದರು. ಆದರೆ, ಇತ್ತೀಚೆಗೆ ಮಧ್ಯಂತರ ತೀರ್ಪು ನೀಡಿರುವ ನ್ಯಾಯಾಲಯವು ಅವರ ಕೋರಿಕೆಯನ್ನು ತಿರಸ್ಕರಿಸಿದೆ. ಹಾಗಾಗಿ, ಈಗ ಅವರು ಭಾರವಾದ ಹೃದಯದಿಂದ ಬರಿಗೈಯಲ್ಲಿ ಸ್ವದೇಶಕ್ಕೆ ವಾಪಸಾಗಿದ್ದಾರೆ.
► 13 ಗಂಟೆಗಳ ಸುದೀರ್ಘ ಪ್ರಯಾಣ
ಹೊಸದಿಲ್ಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿ ಫೋಗಟ್ರನ್ನು ಅವರ ಸ್ವಗ್ರಾಮ ಬಲಾಲಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ದಾರಿಯುದ್ದಕ್ಕೂ ವಿವಿಧ ಗ್ರಾಮಗಳಲ್ಲಿ ಬೆಂಬಲಿಗರು ಮತ್ತು ಸ್ಥಳೀಯ ಖಾಪ್ ಪಂಚಾಯತ್ಗಳು ಅವರನ್ನು ಗೌರವಿಸಿದವು. 135 ಕಿಲೋಮೀಟರ್ ದೂರ ಕ್ರಮಿಸಲು 13 ಗಂಟೆಗಳು ಬೇಕಾದವು.
ವಿನೇಶ್ ತನ್ನ ತವರೂರು ಬಲಾಲಿಯನ್ನು ತಲುಪಿದಾಗ ಮಧ್ಯರಾತ್ರಿಯಾಗಿತ್ತು. ಆ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನೆಲೆಸಿತ್ತು. ಗ್ರಾಮಸ್ಥರು ಫೋಗಟ್ರನ್ನು ಕಣ್ಣೀರು ಮತ್ತು ಮುಗುಳುನಗೆಯಿಂದ ಸ್ವಾಗತಿಸಿದರು. ಸಂಕಷ್ಟದ ಸಮಯದಲ್ಲಿ ಅವರು ತೋರಿಸಿದ ಧೈರ್ಯ ಮತ್ತು ನೀಡಿದ ಪ್ರತಿಹೋರಾಟವನ್ನು ಗ್ರಾಮಸ್ಥರು ಶ್ಲಾಘಿಸಿದರು.
► ‘‘ಸಾವಿರ ಚಿನ್ನದ ಪದಕಕ್ಕಿಂತಲೂ ಹೆಚ್ಚಿನದು’’
ತನ್ನ ತವರು ಗ್ರಾಮ ಬಲಾಲಿಯಲ್ಲಿ ನೆರೆದ ಜನಸಮೂಹವನ್ನು ಕಂಡು ಗದ್ಗದಿತರಾದ ವಿನೇಶ್ ಫೋಗಟ್, ಅವರಿಗೆ ತನ್ನ ಕೃತಜ್ಞತೆಯನ್ನು ಸಲ್ಲಿಸಿದರು.
‘‘ಅವರು ನನಗೆ ಬಂಗಾರದ ಪದಕವನ್ನು ಕೊಡದಿದ್ದರೂ, ಇಲ್ಲಿನ ಜನರು ನನಗೆ ಅದನ್ನು ಕೊಟ್ಟಿದ್ದಾರೆ. ಇಲ್ಲಿ ನಾನು ಪಡೆದಿರುವ ಪ್ರೀತಿ ಮತ್ತು ಗೌರವ 1,000 ಬಂಗಾರದ ಪದಕಕ್ಕಿಂತಲೂ ಹೆಚ್ಚಿನದು’’ ಎಂಬುದಾಗಿ ಫೋಗಟ್ ಭಾವೋದ್ರಿಕ್ತರಾಗಿ ಉದ್ಗರಿಸಿದರು.