ವಿನೇಶ್ ಪೋಗಟ್ ಜಾಹೀರಾತು ಶುಲ್ಕ ನಾಲ್ಕು ಪಟ್ಟು ಏರಿಕೆ!
ಬ್ರಾಂಡ್ ಮೌಲ್ಯ ಹೆಚ್ಚಿಸಿಕೊಂಡ ಪದಕ ವಂಚಿತ ಕುಸ್ತಿ ಪಟು
ವಿನೇಶ್ ಪೋಗಟ್ | PTI
ಹೊಸದಿಲ್ಲಿ : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ, ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯ 50 ಕೆಜಿ ವಿಭಾಗದಲ್ಲಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದರೂ ಒಲಿಂಪಿಕ್ ಪದಕ ಮಾತ್ರ ಅವರಿಗೆ ಮರೀಚಿಕೆಯಾಯಿತು. ಫೈನಲ್ ಸ್ಪರ್ಧೆಯ ದಿನದ ತೂಕದಲ್ಲಿ ಅವರ ದೇಹ ತೂಕ ನಿಗದಿತ ಮಿತಿಗಿಂತ 100 ಗ್ರಾಮ್ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಕ್ರೀಡಾಕೂಟದಿಂದ ಅನರ್ಹಗೊಳಿಸಲಾಯಿತು ಹಾಗೂ ಅವರಿಗೆ ಯಾವುದೇ ಪದಕವನ್ನು ನಿರಾಕರಿಸಲಾಯಿತು. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಈ ನಿರ್ಧಾರವನ್ನು ಅವರು ಕ್ರೀಡಾ ಪಂಚಾಯಿತಿ ನ್ಯಾಯಾಲಯದಲ್ಲಿ ಪಶ್ನಿಸಿ, ತನಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನಂತಿಸಿದರಾದರೂ, ಅಲ್ಲಿಯೂ ಅವರಿಗೆ ಯಶಸ್ಸು ಸಿಗಲಿಲ್ಲ.
ಆದರೆ, ಅವರು ನಿರಾಶೆಯಿಂದ ಭಾರತಕ್ಕೆ ಮರಳಿದಾಗ ದೇಶದಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಅವರನ್ನು ಹೀರೋ ಆಗಿ ಸ್ವೀಕರಿಸಲಾಯಿತು.
ಅವರು ಪದಕವನ್ನು ಗೆಲ್ಲದಿದ್ದರೂ ಒಲಿಂಪಿಕ್ಸ್ನಲ್ಲಿ ಅವರು ನೀಡಿರುವ ಪ್ರದರ್ಶನವು ಅವರ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿದೆ. ಅವರ ಬ್ರಾಂಡ್ ಮೌಲ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಜಾಹೀರಾತುಗಳಿಗೆ ಅವರು ಪಡೆಯುವ ಶುಲ್ಕವೂ ಗಣನೀಯವಾಗಿ ಹೆಚ್ಚಿದೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
2024ರ ಒಲಿಂಪಿಕ್ಸ್ಗೆ ಮೊದಲು ವಿನೇಶ್ ಪ್ರತಿ ಜಾಹೀರಾತಿಗೆ 25 ಲಕ್ಷ ರೂ. ಕೇಳುತ್ತಿದ್ದರು ಎನ್ನಲಾಗಿದೆ. ಈಗ ಅವರು 75 ಲಕ್ಷದಿಂದ ಒಂದು ಕೋಟಿ ರೂ.ವರೆಗೆ ಕೇಳುತ್ತಿದ್ದಾರೆ ಎನ್ನಲಾಗಿದೆ.
ಅದೇ ವೇಳೆ, ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅವಳಿ ಕಂಚುಗಳನ್ನು ಗೆದ್ದಿರುವ ಶೂಟರ್ ಮನು ಭಾಕರ್ ತಮ್ಸ್ಅಪ್ ಜೊತೆಗೆ 1.5 ಕೋಟಿ ರೂ. ಮೊತ್ತದ ಜಾಹೀರಾತು ಒಪ್ಪಂದ ಮಾಡಿಕೊಂಡಿದ್ದಾರೆ. ಒಲಿಂಪಿಕ್ಸ್ಗಿಂತ ಮೊದಲು, ಅವರು ಪ್ರತಿ ಜಾಹೀರಾತಿಗೆ 25 ಲಕ್ಷ ರೂ. ಪಡೆಯುತ್ತಿದ್ದರು.ಒಲಿಂಪಿಕ್ಸ್ ಬಳಿಕ, ಈ ಮೊತ್ತ 6 ಪಟ್ಟು ಹೆಚ್ಚಿದೆ.