ವಿನೇಶ್, ನೀವು ಸೋತಿಲ್ಲ, ನಿಮ್ಮನ್ನು ಸೋಲಿಸಲಾಗಿದೆ: ಬಜರಂಗ್ ಪುನಿಯಾ
ವಿನೇಶ್ ಫೋಗಟ್ , ಬಜರಂಗ್ ಪುನಿಯಾ | PTI
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅನರ್ಹಗೊಂಡಿರುವ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಬೆಂಬಲ ಸೂಚಿಸಿರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ, ನೀವು ಸೋತಿಲ್ಲ, ಆದರೂ ನಿಮ್ಮನ್ನು ಸೋಲಿಸಲಾಗಿದೆ ಎಂದು ಹೇಳಿದ್ದಾರೆ.
100 ಗ್ರಾಂ ಹೆಚ್ಚು ತೂಕ ಹೊಂದಿದ್ದರಿಂದ ಮಹಿಳೆಯರ 52 ಕೆಜಿ ವಿಭಾಗದಲ್ಲಿ ಫೈನಲ್ ಆಡುವ ಅವಕಾಶದಿಂದ ವಂಚಿತರಾಗಿ ತೀವ್ರ ಬೇಸರಗೊಂಡಿದ್ದ ಭಾರತದ ಕುಸ್ತಿತಾರೆ ವಿನೇಶ್ ಗುರುವಾರ ದಿಢೀರನೆ ಕುಸ್ತಿಗೆ ವಿದಾಯ ಹೇಳಿದ್ದಾರೆ.
ಭಾರತದ ಖ್ಯಾತ ಕುಸ್ತಿಪಟು ಬಜರಂಗ್ ಅವರು ವಿನೇಶ್ ಅವರ ನಿವೃತ್ತಿಯ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಜರಂಗ್, ವಿನೇಶ್, ನೀವು ಸೋತಿಲ್ಲ, ನಿಮ್ಮನ್ನು ಸೋಲಿಸಲಾಗಿದೆ. ನಮ್ಮ ಪಾಲಿಗೆ ನೀವು ಎಂದೆಂದಿಗೂ ಚಾಂಪಿಯನ್ ಆಗಿದ್ದೀರಿ. ಭಾರತದ ಸುಪುತ್ರಿ ಮಾತ್ರವಲ್ಲ, ಭಾರತದ ಹೆಮ್ಮೆ ಕೂಡ ಹೌದು ಎಂದು ಬರೆದಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ವಿನೇಶ್ ಅವರ ಹೋರಾಟದ ವೀಡಿಯೊವನ್ನು ಹಂಚಿಕೊಂಡಿರುವ ಬಜರಂಗ್, ದೇವರು ನಿಮ್ಮಂತಹ ಮಗಳನ್ನು ಪ್ರತಿ ಮನೆಗೂ ನೀಡಲಿ. ನೀವು ಎಂದೆಂದಿಗೂ ಕುಸ್ತಿಯ ದಂತಕತೆಯಾಗಿ ಗುರುತಿಸಲ್ಪಡುವಿರಿ ಎಂದು ಹೇಳಿದ್ದಾರೆ.
*ಇದು ದೇಶದ ಪ್ರತಿಯೊಬ್ಬ ಹೆಣ್ಣು ಮಗಳ ಸೋಲು: ಸಾಕ್ಷಿ ಮಲಿಕ್
ವಿನೇಶ್ ಫೋಗಟ್ ಅನರ್ಹಗೊಂಡಿರುವುದಕ್ಕೆ ಆಘಾತ ವ್ಯಕ್ತಪಡಿಸಿರುವ ಮಾಜಿ ಕುಸ್ತಿಪಟು ಸಾಕ್ಷಿ ಮಲಿಕ್, ಇದು ನಿಮ್ಮ ಮಾತ್ರವಲ್ಲ, ನೀವು ಹೋರಾಡಿದ ದೇಶದ ಪ್ರತಿಯೊಬ್ಬ ಹೆಣ್ಣು ಮಗಳ ಸೋಲಾಗಿದೆ ಎಂದು ಹೇಳಿದ್ದಾರೆ.
ಇದು ಇಡೀ ದೇಶಕ್ಕೆ ಎದುರಾದ ಸೋಲು. ಇಡೀ ದೇಶವೇ ನಿಮ್ಮೊಂದಿಗೆ ಇದೆ. ಓರ್ವ ಕ್ರೀಡಾಪಟುವಾಗಿ ನಿಮ್ಮ ಹೋರಾಟಕ್ಕೆ ಸೆಲ್ಯೂಟ್ ಸಲ್ಲಿಸುತ್ತೇನೆ ಎಂದು ಸಾಕ್ಷಿ ಹೇಳಿದ್ದಾರೆ.