ಏಕದಿನ ಕ್ರಿಕೆಟ್ | ವೇಗವಾಗಿ 14 ಸಾವಿರ ರನ್ ಗಳಿಸಿದ 'ಕಿಂಗ್' ಕೊಹ್ಲಿ

ವಿರಾಟ್ ಕೊಹ್ಲಿ | PC : PTI
ದುಬೈ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 14,000 ರನ್ ಮೈಲಿಗಲ್ಲು ತಲುಪಿದ್ದಾರೆ.
ಪಾಕಿಸ್ತಾನದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ತನ್ನ 287ನೇ ಇನಿಂಗ್ಸ್ನಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು.
ಕೊಹ್ಲಿ ಅವರು ಸಚಿನ್ ತೆಂಡುಲ್ಕರ್ ಹಾಗೂ ಕುಮಾರ ಸಂಗಕ್ಕರ ನಂತರ ಏಕದಿನ ಕ್ರಿಕೆಟಿನಲ್ಲಿ 14,000 ರನ್ ಪೂರೈಸಿದ ಮೂರನೇ ಬ್ಯಾಟರ್ ಆಗಿದ್ದಾರೆ. ತೆಂಡುಲ್ಕರ್ 350 ಇನಿಂಗ್ಸ್ಗಳಲ್ಲಿ ಹಾಗೂ ಸಂಗಕ್ಕರ 378ನೇ ಇನಿಂಗ್ಸ್ನಲ್ಲಿ ಈ ಮೈಲಿಗಲ್ಲು ತಲುಪಿದ್ದರು. ಕೊಹ್ಲಿ ಅವರು ತೆಂಡುಲ್ಕರ್ಗಿಂತ 63 ಕಡಿಮೆ ಇನಿಂಗ್ಸ್ಗಳಲ್ಲಿ 14,000 ರನ್ ಪೂರೈಸಿದ್ದಾರೆ.
ಕೊಹ್ಲಿಗೆ ಪಾಕಿಸ್ತಾನ ವಿರುದ್ಧ ಪಂದ್ಯಕ್ಕಿಂತ ಮೊದಲು 14,000 ರನ್ ಪೂರೈಸಲು 15 ರನ್ ಅಗತ್ಯವಿತ್ತು. ಭಾರತದ 242 ರನ್ ಚೇಸ್ ವೇಳೆ ಕೊಹ್ಲಿ ಈ ಸಾಧನೆ ಮಾಡಿದರು.
ಕೊಹ್ಲಿ ಅವರು ಏಕದಿನ ಕ್ರಿಕೆಟಿನ ಸಾರ್ವಕಾಲಿಕ ಗರಿಷ್ಠ ರನ್ ಸ್ಕೋರರ್ಗಳ ಪಟ್ಟಿಯಲ್ಲಿ3ನೇ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿರುವ ಸಂಗಕ್ಕರ(14,234 ರನ್)ದಾಖಲೆಯನ್ನು ಮುರಿಯುವ ಹಾದಿಯಲ್ಲಿದ್ದಾರೆ. ತೆಂಡುಲ್ಕರ್ 18,426 ರನ್ ಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಕೊಹ್ಲಿ ಅವರು ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ಶತಕ (50)ಗಳಿಸಿರುವ ದಾಖಲೆ ತನ್ನದಾಗಿಸಿಕೊಂಡಿದ್ದಾರೆ. 2023ರ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳೆ ತೆಂಡುಲ್ಕರ್ರ ಶತಕಗಳ ದಾಖಲೆ(49 ಶತಕ)ಯನ್ನು ಮುರಿದಿದ್ದರು.
ಇದಕ್ಕೂ ಮೊದಲು ಕೊಹ್ಲಿ ಅವರು ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ಕ್ಯಾಚ್ಗಳನ್ನು ಪಡೆದ ಫೀಲ್ಡರ್ ಎನಿಸಿಕೊಂಡು ಮುಹಮ್ಮದ್ ಅಝರುದ್ದೀನ್ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದರು. ಕೊಹ್ಲಿ ಒಟ್ಟು 158 ಕ್ಯಾಚ್ಗಳನ್ನು ಪಡೆದಿದ್ದಾರೆ.