ವಿರಾಟ್ ಕೊಹ್ಲಿ ಶತಕ ಪೂರೈಸಲು ರನ್ ಲೆಕ್ಕಾಚಾರದಲ್ಲಿತೊಡಗಿದ್ದೆ: ಅಕ್ಷರ್ ಪಟೇಲ್

ವಿರಾಟ್ ಕೊಹ್ಲಿ , ಅಕ್ಷರ್ ಪಟೇಲ್ | PTI
ಹೊಸದಿಲ್ಲಿ: ದುಬೈನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದ ವೇಳೆ ವಿರಾಟ್ ಕೊಹ್ಲಿ ತನ್ನ ಶತಕದ ಹೊಸ್ತಿಲಲ್ಲಿದ್ದಾಗ ಅಕ್ಷರ್ ಪಟೇಲ್ ಅವರು ಸ್ವತಃ ರನ್ ಲೆಕ್ಕಾಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದ ಕಂಡುಬಂತು.
ಭಾರತ ತಂಡದ ಗೆಲುವಿಗೆ 19 ರನ್ ಅಗತ್ಯವಿದ್ದಾಗ ಪಟೇಲ್ ಅವರು ಕ್ರೀಸ್ನಲ್ಲಿ ಕೊಹ್ಲಿ ಅವರನ್ನು ಸೇರಿಕೊಂಡರು. ಆಗ ಕೊಹ್ಲಿ 86 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು.
‘‘ಕೊನೆಯಲ್ಲಿ ನಾನು ಕೂಡ ಕೊಹ್ಲಿ ಅವರು ಶತಕಕ್ಕೋಸ್ಕರ ರನ್ ಲೆಕ್ಕಾಚಾರದಲ್ಲಿ ತೊಡಗಿದ್ದೆ.ನಾನು ಚೆಂಡನ್ನು ಕೆಣಕದಿರಲು ನಿರ್ಧರಿಸಿದ್ದೆ. ಇದೊಂದು ರೀತಿಯ ರಂಜನೀಯ ವಿಷಯವಾಗಿತ್ತು’’ಎಂದು ಐಸಿಸಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಅಕ್ಷರ್ ಹೇಳಿದ್ದಾರೆ.
ಶಾಹೀನ್ ಅಫ್ರಿದಿ 42ನೇ ಓವರ್ನಲ್ಲಿ ಮೂರು ವೈಡ್ಗಳನ್ನು ಎಸೆದಾಗ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿತ್ತು.
ಅಕ್ಷರ್ ಒಂದು ರನ್ ಗಳಿಸಿದಾಗ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದದರು. ಆಗ ಕೊಹ್ಲಿ ಸ್ಟ್ರೈಕ್ ಕಾಯ್ದುಕೊಳ್ಳಬೇಕಾಗಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ಬಯಸಿದ್ದರು.
ಭಾರತದ ಗೆಲುವಿಗೆ ಕೇವಲ 2 ರನ್ ಬೇಕಾಗಿತ್ತು. ಆಗ ಕೊಹ್ಲಿ 96 ರನ್ ಗಳಿಸಿದ್ದರು. ಸಿಕ್ಸರ್ ಸಿಡಿಸುವಂತೆ ನಾಯಕ ರೋಹಿತ್ ಶರ್ಮಾ ಅವರು ಕೊಹ್ಲಿಗೆ ಸನ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ ಅವರು ಸಿಕ್ಸರ್ ಸಿಡಿಸುವ ಪ್ರಯತ್ನಕ್ಕೆ ಕೈಹಾಕದೆ ಆಕರ್ಷಕ ಬೌಂಡರಿ ಗಳಿಸುವ ಮೂಲಕ ತನ್ನ ಶತಕವನ್ನು ಪೂರೈಸಿದರು.
ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ವಿರುದ್ಧ ಸುಲಭ ಜಯ ಸಾಧಿಸಿರುವ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿ ಫೈನಲ್ ಸ್ಥಾನವನ್ನು ಗಿಟ್ಟಿಸಿಕೊಳ್ಳುವತ್ತ ಚಿತ್ತ ಹರಿಸಿದೆ.