ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ 5ನೇ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ | PC : PTI
ಹೊಸದಿಲ್ಲಿ: ಐಸಿಸಿ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಐದನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಾನೊಬ್ಬ ಶ್ರೇಷ್ಠ ಮ್ಯಾಚ್ವಿನ್ನರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
ಇತಿಹಾಸದಲ್ಲಿ ಯಾವೊಬ್ಬ ಆಟಗಾರನು ಒಂದೇ ಎದುರಾಳಿಯ ವಿರುದ್ಧ ಮೂರಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿಯನ್ನು ಜಯಿಸಿಲ್ಲ. ಇದು ಭಾರೀ ಒತ್ತಡದ ಪಂದ್ಯಗಳಲ್ಲಿ ಕೊಹ್ಲಿ ಅವರ ಪ್ರಾಬಲ್ಯವನ್ನು ಎತ್ತಿ ತೋರಿಸುತ್ತದೆ.
ದುಬೈ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ರವಿವಾರ ನಡೆದಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ 111 ಎಸೆತಗಳಲ್ಲಿ ಔಟಾಗದೆ 100 ರನ್ ಗಳಿಸಿದ ಕೊಹ್ಲಿ ಮತ್ತೊಂದು ಶ್ರೇಷ್ಠ ಇನಿಂಗ್ಸ್ ಆಡಿದರು. ಬೌಂಡರಿ ಬಾರಿಸುವ ಮೂಲಕ ರನ್ ಚೇಸ್ ಅನ್ನು ತನ್ನದೇ ಶೈಲಿಯಲ್ಲಿ ಅಂತ್ಯಗೊಳಿಸಿದ ಕೊಹ್ಲಿ ಭಾರತ ತಂಡಕ್ಕೆ ಇನ್ನೂ 45 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ಗಳ ಅಂತರದಿಂದ ಗೆಲುವು ತಂದುಕೊಟ್ಟರು.
ಈ ಗೆಲುವಿನ ಮೂಲಕ ಭಾರತವು ಸೆಮಿ ಫೈನಲ್ ಹೊಸ್ತಿಲಲ್ಲಿದ್ದರೆ, ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡವು ಟೂರ್ನಿಯಲ್ಲಿ ಉಳಿದುಕೊಳ್ಳಲು ಪರದಾಡುವಂತಾಗಿದೆ.
ಒಟ್ಟಾರೆ, ಕೊಹ್ಲಿ ಅವರು ಪಾಕಿಸ್ತಾನ ತಂಡದ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ 17 ಇನಿಂಗ್ಸ್ಗಳಲ್ಲಿ 4 ಶತಕ ಹಾಗೂ 2 ಅರ್ಧಶತಕಗಳ ಸಹಿತ 59.84ರ ಸರಾಸರಿಯಲ್ಲಿ 778 ರನ್ ಗಳಿಸಿದ್ದಾರೆ.
ದುಬೈನಲ್ಲಿ ಬರೋಬ್ಬರಿ 100 ರನ್ ಸಿಡಿಸುವ ಮೂಲಕ ಕೊಹ್ಲಿ ಅವರು ಐತಿಹಾಸಿಕ ಮೈಲಿಗಲ್ಲು ತಲುಪಿದ್ದು, ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೂರನೇ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ. ರಿಕಿ ಪಾಂಟಿಂಗ್ ದಾಖಲೆಯನ್ನು ಮುರಿದಿದ್ದಾರೆ.
ಕೊಹ್ಲಿ ಇದೀಗ 614 ಇನಿಂಗ್ಸ್ಗಳಲ್ಲಿ 52.38ರ ಸರಾಸರಿಯಲ್ಲಿ 82 ಶತಕಗಳು ಹಾಗೂ 142 ಅರ್ಧಶತಕಗಳ ಸಹಿತ ಒಟ್ಟು 27,503 ರನ್ ಗಳಿಸಿದ್ದಾರೆ. ಕೊಹ್ಲಿಗಿಂತ ಸಚಿನ್ ತೆಂಡುಲ್ಕರ್(34,357 ರನ್)ಹಾಗೂ ಕುಮಾರ ಸಂಗಕ್ಕರ(28,016 ರನ್)ಮುಂದಿದ್ದಾರೆ.
ಇದೇ ವೇಳೆ ಕೊಹ್ಲಿ ಅವರು ವೇಗವಾಗಿ 14,000 ಏಕದಿನ ರನ್ ಗಳಿಸಿದ್ದಾರೆ. ಕೇವಲ 287 ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿರುವ ಕೊಹ್ಲಿ ಬ್ಯಾಟಿಂಗ್ ದಂತಕತೆ ತೆಂಡುಲ್ಕರ್ ದಾಖಲೆ(350 ಇನಿಂಗ್ಸ್)ಯನ್ನು ಮುರಿದಿದ್ದಾರೆ.
ಕೊಹ್ಲಿ ಮತ್ತೊಮ್ಮೆ ತಾನು ಪ್ರಮುಖ ಪಂದ್ಯಗಳಲ್ಲಿ ಮಿಂಚಬಲ್ಲ ಆಟಗಾರ ಎಂಬುದನ್ನು ಸಾಬೀತುಪಡಿಸಿದರು. ಸಂದರ್ಭಕ್ಕೆ ತಕ್ಕಂತೆ ಪುಟಿದೆದ್ದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಮೇಲೆ ಪ್ರಾಬಲ್ಯಸಾಧಿಸುವ ಅವರ ಸಾಮರ್ಥ್ಯ ಅವರನ್ನು ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರನ್ನಾಗಿ ಮಾಡಿದೆ. ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ದಾಖಲೆಯ 5ನೇ ಪಂದ್ಯಶ್ರೇಷ್ಠ ಪ್ರಶಸ್ತಿಯು ಅವರ ಸ್ಥಿರ ಪ್ರದರ್ಶನಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಕೊಹ್ಲಿ ಅವರ ಪ್ರದರ್ಶನವು ಅಸಾಧಾರಣವಾದುದು.
*ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ಅವರ ಐದು ಪಂದ್ಯಶ್ರೇಷ್ಠ ಪ್ರಶಸ್ತಿಗಳು ಇಂತಿವೆ.
ಔಟಾಗದೆ 78(61 ಎಸೆತ)- 2012ರ ಟಿ-20 ವಿಶ್ವಕಪ್, ಕೊಲಂಬೊ
107(126 ಎಸೆತ)- 2015ರ ಏಕದಿನ ವಿಶ್ವಕಪ್, ಅಡಿಲೇಡ್
ಔಟಾಗದೆ 55(37 ಎಸೆತ)-2016ರ ಟಿ-20 ವಿಶ್ವಕಪ್, ಕೋಲ್ಕತಾ
ಔಟಾಗದೆ 82(53 ಎಸೆತ)-2022ರ ಟಿ20 ವಿಶ್ವಕಪ್, ಮೆಲ್ಬರ್ನ್
ಔಟಾಗದೆ 100(111 ಎಸೆತ)-2025ರ ಚಾಂಪಿಯನ್ಸ್ ಟ್ರೋಫಿ, ದುಬೈ.