300ನೇ ಏಕದಿನ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ, ಸಹ ಆಟಗಾರರಿಂದ ಅಭಿನಂದನೆ

ವಿರಾಟ್ ಕೊಹ್ಲಿ | PC : PTI
ಹೊಸದಿಲ್ಲಿ: ಟೀಮ್ ಇಂಡಿಯಾ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ದುಬೈನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ರವಿವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 300ನೇ ಏಕದಿನ ಪಂದ್ಯವನ್ನಾಡಿ ಹೊಸ ಮೈಲಿಗಲ್ಲು ತಲುಪಿದರು.
ಪಂದ್ಯಾವಳಿಯ ಕೊನೆಯ ಗ್ರೂಪ್ ಪಂದ್ಯಕ್ಕಿಂತ ಮೊದಲು ಕೊಹ್ಲಿಯ ಸಹ ಆಟಗಾರರು ತಮ್ಮ ಶುಭಾಶಯಗಳನ್ನು ತಿಳಿಸಿದ್ದು, ಭಾರತೀಯ ಕ್ರಿಕೆಟ್ಗೆ ಕೊಹ್ಲಿ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
ಬಿಸಿಸಿಐ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಟೀಮ್ ಇಂಡಿಯಾ ಸದಸ್ಯರು ಕೊಹ್ಲಿ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು ಕಂಡುಬಂತು.
‘‘300ನೇ ಏಕದಿನ ಪಂದ್ಯಗಳನ್ನಾಡುವುದು ಒಂದು ದೊಡ್ಡ ಸಾಧನೆ. ನೀವು ದೇಶಕ್ಕಾಗಿ ಮಾಡಿರುವ ಎಲ್ಲ ಸಾಧನೆ ಅದ್ಭುತ. ನೀವು ನಿಮ್ಮ ಫಿಟ್ನೆಸ್ ಕಾಪಾಡಿಕೊಳ್ಳಬೇಕು. ಪಂದ್ಯ ಗೆಲ್ಲುವ ಪ್ರದರ್ಶನಗಳನ್ನು ನೀಡುತ್ತಿರಬೇಕೆಂದು ನಾನು ಬಯಸುತ್ತೇನೆ. ನಾನು ನಿಮ್ಮೊಂದಿಗೆ ಕ್ರಿಕೆಟ್ ಆಡುವುದನ್ನು ಆನಂದಿಸಿದ ರೀತಿ, ಮುಂದುವರಿಯಲಿ ಎಂದು ಹಾರೈಸುವೆ’’ಎಂದು ವೇಗದ ಬೌಲರ್ ಮುಹಮ್ಮದ್ ಶಮಿ ಹೇಳಿದ್ದಾರೆ.
‘‘ನೀವು ಹಲವು ಯುವಕರಿಗೆ ಒಂದು ಮಾನದಂಡವನ್ನು ನಿಗದಿಪಡಿಸಿದ್ದೀರಿ. ಇನ್ನೂ ಅನೇಕ ಪಂದ್ಯಗಳಲ್ಲಿ ನಿಮ್ಮೊಂದಿಗೆ ಆಡಲು ನಾನು ಎದುರು ನೋಡುತ್ತಿದ್ದೇನೆ’’ ಎಂದು ಶ್ರೇಯಸ್ ಅಯ್ಯರ್ ಹೇಳಿದರು.