ಐಸಿಸಿ ಏಕದಿನ ರ್ಯಾಂಕಿಂಗ್: 4ನೇ ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ | PC : PTI
ಹೊಸದಿಲ್ಲಿ: ಆಸ್ಟ್ರೇಲಿಯ ತಂಡದ ವಿರುದ್ಧ ದುಬೈನಲ್ಲಿ ಮಂಗಳವಾರ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ 84 ರನ್ ಗಳಿಸಿ ವೀರೋಚಿತ ಪ್ರದರ್ಶನ ನೀಡಿರುವ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಕ್ರಿಕೆಟಿನ ಬ್ಯಾಟರ್ಗಳ ಹೊಸ ರ್ಯಾಂಕಿಂಗ್ ನಲ್ಲಿ 4ನೇ ಸ್ಥಾನಕ್ಕೇರಿದ್ದಾರೆ.
36ರ ಹರೆಯದ ಕೊಹ್ಲಿ ಅವರು ಭಾರತ ತಂಡದ ನಾಯಕ ರೋಹಿತ್ ಶರ್ಮಾರನ್ನು ಹಿಂದಿಕ್ಕಿ ಈ ಸ್ಥಾನ ಪಡೆದರು. ರೋಹಿತ್ 5ನೇ ಸ್ಥಾನಕ್ಕೆ ಕುಸಿದಿದ್ದು, ರೋಹಿತ್ರ ಆರಂಭಿಕ ಜೊತೆಗಾರ ಶುಭಮನ್ ಗಿಲ್ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಭಾರತ ವಿರುದ್ಧ ಸೋತ ನಂತರ ಏಕದಿನ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವ್ ಸ್ಮಿತ್ ಟೂರ್ನಿಯಲ್ಲಿ ನೀಡಿರುವ ಬ್ಯಾಟಿಂಗ್ ಕೊಡುಗೆಯಿಂದಾಗಿ 16 ಸ್ಥಾನ ಮೇಲಕ್ಕೇರಿ ಆರನೇ ಸ್ಥಾನ ತಲುಪಿದ್ದಾರೆ.
ಇದೇ ವೇಳೆ ಅಫ್ಘಾನಿಸ್ತಾನದ ಸ್ಟಾರ್ ಆಟಗಾರ ಅಝ್ಮತುಲ್ಲಾ ಉಮರ್ರ್ಝೈ ತಮ್ಮದೇ ದೇಶದ ಮುಹಮ್ಮದ್ ನಬಿ ಅವರನ್ನು ಹಿಂದಿಕ್ಕಿ ಐಸಿಸಿ ಆಲ್ರೌಂಡರ್ಗಳ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 5 ವಿಕೆಟ್ ಗೊಂಚಲು ಹಾಗೂ ಆಸ್ಟ್ರೇಲಿಯದ ವಿರುದ್ಧ ಅರ್ಧಶತಕ ಗಳಿಸಿದ ನಂತರ ಉಮರ್ರ್ಝೈ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ಭಾರತದ ಅಕ್ಷರ್ ಪಟೇಲ್ ಆಲ್ರೌಂಡರ್ ರ್ಯಾಂಕಿಂಗ್ ನಲ್ಲಿ 17 ಸ್ಥಾನ ಭಡ್ತಿ ಪಡೆದು 13ನೇ ಸ್ಥಾನಕ್ಕೇರಿದರು. ಜೀವನಶ್ರೇಷ್ಠ ರೇಟಿಂಗ್ ಪಾಯಿಂಟ್ಸ್(194)ಪಡೆದಿದ್ದಾರೆ.
ಬೌಲಿಂಗ್ ರ್ಯಾಂಕಿಂಗ್ ನಲ್ಲಿ ನ್ಯೂಝಿಲ್ಯಾಂಡ್ನ ಮ್ಯಾಟ್ ಹೆನ್ರಿ 3 ಸ್ಥಾನ ಮೇಲಕ್ಕೇರಿ 3ನೇ ಸ್ಥಾನ(649 ಪಾಯಿಂಟ್ಸ್)ಪಡೆದಿದ್ದಾರೆ. ಶ್ರೀಲಂಕಾದ ಮಹೀಶ್ ತೀಕ್ಷಣ ಹಾಗೂ ದಕ್ಷಿಣ ಆಫ್ರಿಕಾದ ಕೇಶವ ಮಹಾರಾಜ್ ಮೊದಲೆರಡು ಸ್ಥಾನದಲ್ಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಮೊದಲಿನ ಲಯಕ್ಕೆ ಮರಳಿರುವ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ 3 ಸ್ಥಾನ ಮೇಲಕ್ಕೇರಿ 11ನೇ ಸ್ಥಾನದಲ್ಲಿದ್ದಾರೆ.