ಸೂರ್ಯ ಕುಮಾರ್ ರನ್ನು ಹಿಂದಿಕ್ಕಿದ ʼಕಿಂಗ್ʼ ಕೊಹ್ಲಿಗೆ ‘ಆರೆಂಜ್ ಕ್ಯಾಪ್ʼ

ವಿರಾಟ್ ಕೊಹ್ಲಿ | Credit: Sportzpics
ಹೊಸದಿಲ್ಲಿ: ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದವರು ಧರಿಸುವ ‘ಆರೆಂಜ್ ಕ್ಯಾಪ್’ ರವಿವಾರ ಹಲವು ಆಟಗಾರರ ಕೈಗಳನ್ನು ಬದಲಾಯಿಸಿದೆ. ಮೊದಲಿಗೆ ಮುಂಬೈ ಇಂಡಿಯನ್ಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಗುಜರಾತ್ ಟೈಟಾನ್ಸ್ ಬ್ಯಾಟರ್ ಸಾಯಿ ಸುದರ್ಶನ್ರಿಂದ ಮಧ್ಯಾಹ್ನದ ಪಂದ್ಯದ ನಂತರ ‘ಆರೆಂಜ್ ಕ್ಯಾಪ್’ಪಡೆದರು. ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಕೇವಲ 28 ಎಸೆತಗಳಲ್ಲಿ 54 ರನ್ ಗಳಿಸಿರುವ ಸೂರ್ಯಕುಮಾರ್, ಸುದರ್ಶನ್(417 ರನ್)ರನ್ನು ಹಿಂದಿಕ್ಕಿ ಒಟ್ಟು 427 ರನ್ ಗಳಿಸಿದರು.
ಆದರೆ ಸೂರ್ಯಕುಮಾರ್ ಅವರು ವಿರಾಟ್ ಕೊಹ್ಲಿಗೆ ತನ್ನ ಆರೆಂಜ್ ಕ್ಯಾಪ್ ಅನ್ನು ಬಿಟ್ಟುಕೊಟ್ಟರು. ಡೆಲ್ಲಿ ಕ್ಯಾಪಿಟಲ್ಸ್- ಆರ್ಸಿಬಿ ನಡುವಿನ ಪಂದ್ಯದ ವೇಳೆ ಕೊಹ್ಲಿ 47 ಎಸೆತಗಳಲ್ಲಿ 51 ರನ್ ಸಿಡಿಸಿದರು. ಈ ಮೂಲಕ ಟೂರ್ನಿಯಲ್ಲಿ ಒಟ್ಟು 443 ರನ್ ಗಳಿಸಿ ಟಾಪ್ ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ.
ಸೋಮವಾರ ಜೈಪುರದಲ್ಲಿ ಗುಜರಾತ್ ಕ್ರಿಕೆಟ್ ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದು, ಸಾಯಿ ಸುದರ್ಶನ್ ಮತ್ತೊಮ್ಮೆ ಆರೆಂಜ್ ಕ್ಯಾಪ್ ಧರಿಸುವ ಸಾಧ್ಯತೆಯಿದೆ.
►ಹೇಝಲ್ ವುಡ್ಗೆ ಪರ್ಪಲ್ ಕ್ಯಾಪ್: ಆರ್ಸಿಬಿ ಬೌಲರ್ ಜೋಶ್ ಹೇಝಲ್ ವುಡ್ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಡೆಲ್ಲಿ ತಂಡದ ವಿರುದ್ಧ 36 ರನ್ಗೆ 2 ವಿಕೆಟ್ ಗಳನ್ನು ಕಬಳಿಸಿರುವ ಹೇಝಲ್ ವುಡ್ 10 ಪಂದ್ಯಗಳಲ್ಲಿ ಒಟ್ಟು 18 ವಿಕೆಟ್ ಗಳನ್ನು ಪಡೆದಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ನೂರ್ ಅಹ್ಮದ್ 14 ವಿಕೆಟ್ ಗಳೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ನ ಟ್ರೆಂಟ್ ಬೌಲ್ಟ್, ಆರ್ಸಿಬಿಯ ಕೃನಾಲ್ ಪಾಂಡ್ಯ ಹಾಗೂ ಸನ್ರೈಸರ್ಸ್ ಹೈದರಾಬಾದ್ನ ಹರ್ಷಲ್ ಪಟೇಲ್ ತಲಾ 13 ವಿಕೆಟ್ ಗಳನ್ನು ಉರುಳಿಸಿದ್ದಾರೆ.