ಏಕದಿನದಲ್ಲಿ ಸಚಿನ್ ತೆಂಡುಲ್ಕರ್ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ Photo- PTI
ಹೊಸದಿಲ್ಲಿ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಏಕದಿನ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಮತ್ತೊಂದು ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಶ್ರೀಲಂಕಾ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಭಾರತದ ಮಾಜಿ ನಾಯಕ ಕೊಹ್ಲಿ ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಪೂರೈಸಿದರು.
ಕೊಹ್ಲಿ ಅವರು ವೃತ್ತಿಜೀವನದಲ್ಲಿ ವರ್ಷವೊಂದರಲ್ಲಿ 8ನೇ ಬಾರಿ ಸಾವಿರ ರನ್ ಸರದಾರನಾಗಿ ಹೊರಹೊಮ್ಮಿದ್ದಾರೆ. ತನ್ನ ವೃತ್ತಿಬದುಕಿನಲ್ಲಿ 7 ಬಾರಿ ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಗಳಿಸಿರುವ ಭಾರತದ ಲೆಜೆಂಡ್ ಸಚಿನ್ ತೆಂಡುಲ್ಕರ್ ಅವರ ಹಳೆಯ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.
ಕೊಹ್ಲಿ ಅವರು 2011,2012, 2013, 2014, 2017, 2018 ಹಾಗೂ 2019ರಲ್ಲಿ 1.000ಕ್ಕೂ ಅಧಿಕ ರನ್ ಗಳಿಸಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದರು. ತೆಂಡುಲ್ಕರ್ ಅವರು 1994, 1996, 1997, 1998, 2000,2003 ಹಾಗೂ 2007ರಲ್ಲಿ ಈ ಸಾಧನೆ ಮಾಡಿದ್ದರು.
ಕೊಹ್ಲಿ ಅವರು ಶ್ರೀಲಂಕಾ ವಿರುದ್ಧ 10 ಶತಕಗಳನ್ನು ಸಿಡಿಸಿರುವ ದಾಖಲೆಯನ್ನು ಹೊಂದಿದ್ದಾರೆ.
ತೆಂಡುಲ್ಕರ್ ಅವರು ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆಯನ್ನು ಈಗಲೂ ಉಳಿಸಿಕೊಂಡಿದ್ದಾರೆ. ಮುಂಬೈ ಬ್ಯಾಟರ್ 1998ರಲ್ಲಿ ಒಟ್ಟು 1,894 ರನ್ ಗಳಿಸಿದ್ದರು.
ಕೊಹ್ಲಿ ಅವರು ಏಕದಿನ ಕ್ರಿಕೆಟ್ನಲ್ಲಿ 118ನೇ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸುವ ಮೂಲಕ ಮತ್ತೊಂದು ಪ್ರಮುಖ ಮೈಲಿಗಲ್ಲು ತಲುಪಿದರು. ಈ ಸಾಧನೆಯ ಮೂಲಕ ಪ್ರತಿಷ್ಠಿತ ಪಟ್ಟಿಯಲ್ಲಿ ಶ್ರೀಲಂಕಾದ ದಂತಕತೆ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಮುರಿದರು. ಏಕದಿನ ಕ್ರಿಕೆಟಿಗರಲ್ಲಿ ತೆಂಡುಲ್ಕರ್ ಮಾತ್ರ 145 ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ್ದಾರೆ.