ಟ್ವೆಂಟಿ-20 ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
Photo: twitter/IPL
ಬೆಂಗಳೂರು: ಅಂತರ್ ರಾಷ್ಟ್ರೀಯ ಕ್ರಿಕೆಟ್ ಆಗಿರಲಿ ಅಥವಾ ಫ್ರಾಂಚೈಸಿ ಕ್ರಿಕೆಟ್ ಆಗಿರಲಿ ವಿರಾಟ್ ಕೊಹ್ಲಿ ಮೈದಾನದೊಳಗೆ ಇಳಿದಾಗಲೆಲ್ಲಾ ಹೊಸ ದಾಖಲೆ ಸೃಷ್ಟಿಸುತ್ತಾರೆ. ಸ್ಟಾರ್ ಬ್ಯಾಟರ್ ತನ್ನ ಬ್ಯಾಟ್ ನಿಂದ ದಾಖಲೆಯನ್ನು ನಿರ್ಮಿಸುವುದು ಮಾತ್ರವಲ್ಲ, ಮೈದಾನದಲ್ಲಿ ಹೊಸ ಸಂಚಲನ ಮೂಡಿಸುತ್ತಾರೆ. ಭಾರತದ ಹಾಗೂ ಆರ್ಸಿಬಿಯ ಮಾಜಿ ನಾಯಕ ಕೊಹ್ಲಿ ಇದೀಗ ಟಿ-20 ಕ್ರಿಕೆಟ್ ನಲ್ಲಿ ಹೆಚ್ಚು ಕ್ಯಾಚ್ ಗಳನ್ನು ಪಡೆದ ಭಾರತೀಯ ಫೀಲ್ಡರ್ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.
ಕೊಹ್ಲಿ ಅವರು ಪಂಜಾಬ್ ಆಟಗಾರ ಜಾನಿ ಬೈರ್ಸ್ಟೋವ್ ನೀಡಿದ ಕ್ಯಾಚ್ ಪಡೆದರು. ಇದು ಟಿ-20ಯಲ್ಲಿ ಕೊಹ್ಲಿ ಪಡೆದ 173ನೇ ಕ್ಯಾಚ್ ಆಗಿತ್ತು. ಈ ಸಾಧನೆಯ ಮೂಲಕ ಕೊಹ್ಲಿ ಅವರು ಸುರೇಶ್ ರೈನಾ ನಿರ್ಮಿಸಿರುವ ದಾಖಲೆ(172 ಕ್ಯಾಚ್ಗಳು)ಯನ್ನು ಮುರಿದರು.
ಭಾರತದ ನಾಯಕ ರೋಹಿತ್ ಶರ್ಮಾ(167 ಕ್ಯಾಚ್ಗಳು)ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆನಂತರ ಮನೀಶ್ ಪಾಂಡೆ(146) ಹಾಗೂ ಸೂರ್ಯಕುಮಾರ್ ಯಾದವ್(136)ಅವರಿದ್ದಾರೆ.
ಟಾಸ್ ಜಯಿಸಿರುವ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು. ಈ ವರ್ಷದ ಐಪಿಎಲ್ ನಲ್ಲಿ ಆರ್ ಸಿ ಬಿ ಇಂದು ಮೊದಲ ಬಾರಿ ತವರು ಮೈದಾನವಾದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿತು.
ಆರ್ಸಿಬಿ ಶುಕ್ರವಾರ ರಾತ್ರಿ ನಡೆದಿದ್ದ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರು ವಿಕೆಟ್ಗಳ ಅಂತರದಿಂದ ಸೋತಿತ್ತು.
ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕೊಹ್ಲಿ ಅವರು ಟಿ-20 ಕ್ರಿಕೆಟ್ ನಲ್ಲಿ 12,000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.
370ನೇ ಟಿ-20 ಪಂದ್ಯದ 360ನೇ ಇನಿಂಗ್ಸ್ ನಲ್ಲಿ ಕೊಹ್ಲಿ ದಾಖಲೆ ನಿರ್ಮಿಸಿದ್ದರು. ಟಿ-20 ಕ್ರಿಕೆಟ್ ನಲ್ಲಿ ಕೊಹ್ಲಿ ಈ ತನಕ 8 ಶತಕ ಹಾಗೂ 91 ಅರ್ಧಶತಕಗಳನ್ನು ಗಳಿಸಿದ್ದಾರೆ.
ಕೊಹ್ಲಿ ಟೀಮ್ ಇಂಡಿಯಾದ ಪರ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದು ಶತಕ ಸಹಿತ 4,037 ರನ್ ಗಳಿಸಿದ್ದಾರೆ. ಉಳಿದ ರನ್ ಅನ್ನು ತವರು ತಂಡ ಡೆಲ್ಲಿ, ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ರನ್ ಗಳಿಸಿದ್ದಾರೆ.