ಮತ್ತೊಂದು ಮೈಲಿಗಲ್ಲು ತಲುಪುವ ಸನಿಹದಲ್ಲಿ ವಿರಾಟ್ ಕೊಹ್ಲಿ
Photo: twitter.com/BCCI
ಹೊಸದಿಲ್ಲಿ: ಭಾರತದ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಈಗಾಗಲೇ ತನ್ನ ಹೆಸರಿನಲ್ಲಿ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿರಾಟ್ ತನ್ನ ಭವ್ಯ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪುವ ಅಂಚಿನಲ್ಲಿದ್ದಾರೆ. ವಿರಾಟ್ ಇತ್ತೀಚೆಗೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಗರಿಷ್ಠ ಏಕದಿನ ಶತಕಗಳ ದಾಖಲೆಯನ್ನು ಮುರಿದಿದ್ದರು. ಕಳೆದ ವರ್ಷ ನವೆಂಬರ್ ನಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಮ್ ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 50ನೇ ಏಕದಿನ ಶತಕ ಸಿಡಿಸಿದ್ದರು. ಈ ಮೂಲಕ ತೆಂಡುಲ್ಕರ್(49 ಶತಕ)ದಾಖಲೆ ಮುರಿದಿದ್ದರು.
35ರ ಹರೆಯದ ಕೊಹ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲು ಸಿದ್ದರಾಗುತ್ತಿದ್ದಾರೆ. ತನ್ನ ಟೆಸ್ಟ್ ವೃತ್ತಿಬದುಕಿನಲ್ಲಿ 9,000 ರನ್ ಪೂರೈಸಲು ಸಜ್ಜಾಗಿದ್ದಾರೆ.
ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಜ.25ರಂದು ಹೈದರಾಬಾದ್ ನಲ್ಲಿ ಆರಂಭವಾಗಲಿದೆ.
ಈ ತನಕ 113 ಟೆಸ್ಟ್ ಪಂದ್ಯಗಳಲ್ಲಿ 8,848 ರನ್ ಗಳಿಸಿರುವ ವಿರಾಟ್ ಕೊಹ್ಲಿ ಭಾರತದ ಪರ ಟೆಸ್ಟ್ ಪಂದ್ಯದಲ್ಲಿ 4ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ವಿರಾಟ್ ಗೆ 9 ಸಾವಿರದ ರನ್ ಮೈಲಿಗಲ್ಲು ತಲುಪಲು 152 ರನ್ ಅಗತ್ಯವಿದೆ. ಕೊಹ್ಲಿ ಒಂದು ವೇಳೆ 152 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವಲ್ಲಿ ಶಕ್ತರಾದರೆ ಭಾರತದ ಬ್ಯಾಟರ್ ಗಳ ಪೈಕಿ ನಾಲ್ಕನೇ ಗರಿಷ್ಠ ಟೆಸ್ಟ್ ರನ್ ಸ್ಕೋರರ್ ಆಗಿ ಮುಂದುವರಿಯಲಿದ್ದಾರೆ. ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 29 ಅರ್ಧಶತಕ ಹಾಗೂ 30 ಶತಕಗಳನ್ನು ಸಿಡಿಸಿದ್ದಾರೆ.
200 ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಗಳಿಸಿರುವ ತೆಂಡುಲ್ಕರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ಲೆಜೆಂಡ್ ಹಾಗೂ ಭಾರತೀಯ ಕ್ರಿಕೆಟ್ ತಂಡದ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ 163 ಟೆಸ್ಟ್ ಪಂದ್ಯಗಳಲ್ಲಿ 13,265 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ 125 ಟೆಸ್ಟ್ ಪಂದ್ಯಗಳಲ್ಲಿ 10,122 ರನ್ ಗಳಿಸಿ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ಈ ಹಿಂದಿನ ಭಾರತದ ಪ್ರವಾಸದಲ್ಲಿ 2-2ರಿಂಡ ಡ್ರಾ ಸಾಧಿಸಿದೆ.