ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಆಟಗಾರ: ಸ್ಟೀವ್ ಸ್ಮಿತ್ ಹೇಳಿದ್ದೇಕೆ?
ವಿರಾಟ್ ಕೊಹ್ಲಿ | ಸ್ಟೀವ್ ಸ್ಮಿತ್ ( PC: x.com/cricketchamber)
ಸಿಡ್ನಿ: ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರನ್ನು ವಿಶಿಷ್ಟವಾಗಿ ಬಣ್ಣಿಸಿದ ಹಿರಿಯ ಆಟಗಾರ ಸ್ಟೀವ್ ಸ್ಮಿತ್, "ಕೊಹ್ಲಿ ತಮ್ಮ ಯೋಚನೆ ಮತ್ತು ಕ್ರಿಯೆಯಲ್ಲಿ ಆಸ್ಟ್ರೇಲಿಯನ್ ಆಟಗಾರ" ಎಂದು ಅಭಿಪ್ರಾಯಪಟ್ಟಿದ್ದಾರೆ. 2024-25ರ ಬಾರ್ಡರ್-ಗಾವಸ್ಕರ್ ಟ್ರೋಫಿಗೆ ಉಭಯ ದೇಶಗಳು ಸಜ್ಜಾಗುತ್ತಿರುವ ನಡುವೆ ಸ್ಮಿತ್ ಈ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಉಭಯ ದೇಶಗಳ ನಡುವಿನ ಮಹತ್ವದ ಸರಣಿಯ ಐದು ಪಂದ್ಯಗಳು ಕ್ರಮವಾಗಿ ಪರ್ತ್, ಅಡಿಲೇಡ್ (ಪಿಂಕ್ ಬಾಲ್), ಬ್ರಿಸ್ಬೇನ್, ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ನಡೆಯಲಿವೆ. ಆಸ್ಟ್ರೇಲಿಯಾದಲ್ಲಿ ನಡೆದ 2018-19 ಮತ್ತು 2020-21 ಸರಣಿಯನ್ನು ಭಾರತ ಗೆದ್ದುಕೊಂಡಿತ್ತು.
"ಯೋಚನಾ ಲಹರಿ ಮತ್ತು ಕ್ರಿಯೆಯಲ್ಲಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಆಟಗಾರ ಎನ್ನುವುದು ನನ್ನ ಭಾವನೆ. ಆತ ಹೋರಾಟಕ್ಕೆ ಧುಮುಕುವ ರೀತಿ, ಸವಾಲನ್ನು ಸ್ವೀಕರಿಸುವ ರೀತಿ ಮತ್ತು ಎದುರಾಳಿಯ ಮೇಲೆ ಪ್ರಾಬಲ್ಯ ಮೆರೆಯುವ ವಿಧಾನ. ಬಹುತೇಕ ಭಾರತೀಯ ಆಟಗಾರರಲ್ಲಿ ಅವರು ಆಸ್ಟ್ರೇಲಿಯನ್ ಆಟಗಾರ ಎಂದೇ ನಾನು ಹೇಳಬೇಕಾಗುತ್ತದೆ" ಎಂದು ಅವರ ಹೇಳಿಕೆಯನ್ನು ಸ್ಟಾರ್ ಸ್ಪೋರ್ಟ್ಸ್ ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದೆ.
ಒಟ್ಟು 29 ಟೆಸ್ಟ್ ಶತಕ ಸೇರಿದಂತೆ 80 ಅಂತರಾಷ್ಟ್ರೀಯ ಶತಕಗಳನ್ನು ಸಿಡಿಸಿರುವ ಕೊಹ್ಲಿ, 113 ಟೆಸ್ಟ್ ಪಂದ್ಯಗಳಲ್ಲಿ 49.16 ಸರಾಸರಿಯೊಂದಿಗೆ 8846 ರನ್ ಗಳಿಸಿದ್ದಾರೆ. ಸ್ಮಿತ್ 109 ಟೆಸ್ಟ್ ಪಂದ್ಯಗಳಲ್ಲಿ 56.97 ಸರಾಸರಿಯೊಂದಿಗೆ 32 ಶತಕ ಸಹಿತ 9685 ರನ್ ಗಳಿಸಿದ್ದಾರೆ.
ಇಬ್ಬರು ಆಟಗಾರರು ಪರಸ್ಪರ ಸಂದೇಶಗಳನ್ನು ವಿನಿಯಮ ಮಾಡಿಕೊಳ್ಳುತ್ತಿದ್ದು, ನವೆಂಬರ್ 22ರಿಂದ ಆರಂಭವಾಗುವ ಬಾರ್ಡರ್ ಗಾವಸ್ಕರ್ ಟ್ರೋಫಿಯಲ್ಲಿ ಕೊಹ್ಲಿ ಅವರನ್ನು ಎದುರಿಸಲು ಕುತೂಹಲದಿಂದ ಕಾಯುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ.