ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ‘ಚೇಸಿಂಗ್ ಮಾಸ್ಟರ್’ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ | Photo: X
ಹೊಸದಿಲ್ಲಿ : ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ರವಿವಾರ ಚೆನ್ನೈನಲ್ಲಿ ನಡೆದಿದ್ದ ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ.
85 ರನ್ ಗಳಿಸಿದ್ದ ಕೊಹ್ಲಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಯಶಸ್ವಿ ರನ್ ಚೇಸಿಂಗ್ ವೇಳೆ ಗರಿಷ್ಠ ರನ್ ಗಳಿಸಿದ್ದ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದರು. ಕೊಹ್ಲಿ ರನ್ ಬೆನ್ನಟ್ಟುವಾಗ ಒಟ್ಟು 5,517 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯ ವಿರುದ್ಧ 200 ರನ್ ಚೇಸಿಂಗ್ ವೇಳೆ ಕೆ.ಎಲ್.ರಾಹುಲ್(ಔಟಾಗದೆ 97) ಅವರೊಂದಿಗೆ 165 ರನ್ ಜೊತೆಯಾಟ ನಡೆಸಿದ್ದ ಕೊಹ್ಲಿ ಅವರು ಆರು ವಿಕೆಟ್ ಅಂತರದ ಗೆಲುವಿಗೆ ನೆರವಾಗಿದ್ದರು. 5 ಬಾರಿಯ ಚಾಂಪಿಯನ್ ತಂಡದ ವಿರುದ್ದ ಸಾಂದರ್ಭಿಕ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಕ್ರಿಕೆಟ್ ವಿಶ್ವಕಪ್ ಗಳಲ್ಲಿ ಗರಿಷ್ಠ ರನ್ ಗಳಿಸಿದ ಅಗ್ರ-10 ಪಟ್ಟಿಯಲ್ಲಿ ಕೂಡ ಸ್ಥಾನ ಪಡೆದಿದ್ದಾರೆ.
50 ಓವರ್ಗಳ ವಿಶ್ವಕಪ್ ಟೂರ್ನಮೆಂಟ್ನಲ್ಲಿ ಒಟ್ಟು 1,115 ರನ್ ಗಳಿಸಿರುವ 34ರ ಹರೆಯದ ಕೊಹ್ಲಿ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ವೆಸ್ಟ್ಇಂಡೀಸ್ ದಂತಕತೆ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಮುರಿಯಲು ಕೇವಲ 111 ರನ್ ಅಗತ್ಯವಿದೆ.