ರಣಜಿ ಪಂದ್ಯಗಳಿಂದ ದೂರ ಉಳಿಯಲಿರುವ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್!

ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ (Photo: PTI)
ಹೊಸದಿಲ್ಲಿ: ESPNCricinfo ವರದಿಯ ಪ್ರಕಾರ, ಮುಂದಿನ ಸುತ್ತಿನ ರಣಜಿ ಪಂದ್ಯಗಳಲ್ಲಿ ಗಾಯದ ಕಾರಣಕ್ಕೆ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಆಟವಾಡುತ್ತಿಲ್ಲ. ನಾವು ಗಾಯಗೊಂಡಿದ್ದು, ಜನವರಿ 23ರಿಂದ ಪ್ರಾರಂಭಗೊಳ್ಳಲಿರುವ ರಣಜಿ ಪಂದ್ಯಗಳಲ್ಲಿ ಆಟವಾಡಲು ಸಾಧ್ಯವಾಗುತ್ತಿಲ್ಲ ಎಂದು ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಇಬ್ಬರೂ ಬಿಸಿಸಿಐನ ವೈದ್ಯಕೀಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ವಿರಾಟ್ ಕೊಹ್ಲಿ ಕುತ್ತಿಗೆ ನೋವು ಅನುಭವಿಸುತ್ತಿದ್ದು, ಅದಕ್ಕೆ ಇಂಜೆಕ್ಷನ್ ಪಡೆಯಬೇಕಿದ್ದರೆ, ಕೆ.ಎಲ್.ರಾಹುಲ್ ಮೊಣಕೈ ನೋವಿಗೆ ತುತ್ತಾಗಿದ್ದು, ಪಂಜಾಬ್ ಮತ್ತು ಕರ್ನಾಟಕ ತಂಡಗಳ ನಡುವೆ ನಡೆಯಲಿರುವ ಪಂದ್ಯದಿಂದ ದೂರ ಉಳಿಯಲಿದ್ದಾರೆ. ಆದರೆ, ರಿಷಭ್ ಪಂತ್ (ದಿಲ್ಲಿ), ಶುಭಮನ್ ಗಿಲ್ (ಪಂಜಾಬ್) ಹಾಗೂ ರವೀಂದ್ರ ಜಡೇಜಾ (ಸೌರಾಷ್ಟ್ರ) ರಣಜಿ ಪಂದ್ಯಗಳಲ್ಲಿ ಆಟವಾಡಲಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಶಿಸ್ತು ಹಾಗೂ ಒಗ್ಗಟ್ಟನ್ನು ಕಾಪಾಡಲು ಗುರುವಾರ ಬಿಸಿಸಿಐ 10 ಅಂಶಗಳ ನೀತಿಯನ್ನು ಜಾರಿಗೊಳಿಸಿದೆ. ಈ ನೀತಿಯನ್ವಯ ದೇಶೀಯ ಕ್ರಿಕೆಟ್ ನಲ್ಲಿ ಕಡ್ಡಾಯ ಪಾಲ್ಗೊಳ್ಳುವಿಕೆ, ಪ್ರವಾಸದ ಸಂದರ್ಭದಲ್ಲಿ ಕುಟುಂಬಗಳು ಹಾಗೂ ಖಾಸಗಿ ಸಿಬ್ಬಂದಿಗಳ ಉಪಸ್ಥಿತಿಗೆ ನಿರ್ಬಂಧ ಹಾಗೂ ಸರಣಿಯ ಸಂದರ್ಭದಲ್ಲಿ ವೈಯಕ್ತಿಕ ಅನುಮೋದನೆಗಳ ನಿಷೇಧ ಸೇರಿವೆ.