ಬೌಲಿಂಗ್ ಅಭ್ಯಾಸ ನಡೆಸಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ| PC : NDTV
ಅಡಿಲೇಡ್: ಭಾರತದ ಅವಳಿ ವೇಗದ ಬೌಲರ್ಗಳಾದ ಜಸ್ಪ್ರಿತ್ ಬುಮ್ರಾ ಹಾಗೂ ಮುಹಮ್ಮದ್ ಸಿರಾಜ್ ಜೊತೆಗೆ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮಂಗಳವಾರ ಅಡಿಲೇಡ್ ಓವಲ್ನಲ್ಲಿ ಬೌಲಿಂಗ್ ಅಭ್ಯಾಸದಿಂದ ದೂರ ಉಳಿದಿದ್ದರು. ಆದರೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬೌಲಿಂಗ್ ಅಭ್ಯಾಸ ನಡೆಸಿ ಗಮನ ಸೆಳೆದರು.
ಕೊಹ್ಲಿ ಅವರು ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಈ ಹಿಂದೆ ಬೌಲಿಂಗ್ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 11 ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡಿರುವ ಕೊಹ್ಲಿ ಅವರು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಏಕದಿನ ಕ್ರಿಕೆಟ್ನಲ್ಲಿ 5 ಹಾಗೂ ಟಿ-20 ಕ್ರಿಕೆಟ್ನಲ್ಲಿ ಆರು ವಿಕೆಟ್ಗಳನ್ನು ಉರುಳಿಸಿದ್ದಾರೆ.
ಇತ್ತೀಚೆಗೆ ಪರ್ತ್ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದ ಕೊಹ್ಲಿ ಅವರು ಪಿಂಕ್-ಬಾಲ್ ಟೆಸ್ಟ್ನಲ್ಲಿ ಅಲ್ಪ ಮೊತ್ತಕ್ಕೆ ಔಟಾಗಿದ್ದರು.
ಭಾರತ ತಂಡವು ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ಗಳ ಅಂತರದಿಂದ ಹೀನಾಯವಾಗಿ ಸೋತ ನಂತರ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತದ ಬ್ಯಾಟರ್ಗಳು ಮಂಗಳವಾರ ಅಡಿಲೇಡ್ನಲ್ಲಿ ಕೆಂಪು ಚೆಂಡಿನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಬ್ರಿಸ್ಬೇನ್ನಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವುದು ಬ್ಯಾಟರ್ಗಳ ಉದ್ದೇಶವಾಗಿದೆ.
ಆಸ್ಟ್ರೇಲಿಯ ತಂಡವು ಶನಿವಾರದಿಂದ ಆರಂಭವಾಗಲಿರುವ 3ನೇ ಟೆಸ್ಟ್ಗಾಗಿ ಈಗಾಗಲೇ ಬ್ರಿಸ್ಬೇನ್ಗೆ ಪ್ರಯಾಣಿಸಿದೆ. ಭಾರತೀಯ ಕ್ರಿಕೆಟ್ ತಂಡವು ರಕ್ಷಣಾತ್ಮಕ ಆಟ ಹಾಗೂ ಹೊಡೆತಗಳ ಆಯ್ಕೆ ಸೇರಿದಂತೆ ಕೆಂಪು ಚೆಂಡಿನ ಟೆಕ್ನಿಕ್ಗಳತ್ತ ಗಮನ ನೀಡಲು ಅಡಿಲೇಡ್ನಲ್ಲಿ ಉಳಿದುಕೊಂಡಿದೆ.
ತನ್ನ ಮಗನ ಜನನದ ನಂತರ ಭಾರತ ತಂಡಕ್ಕೆ ವಾಪಸಾಗಿರುವ ರೋಹಿತ್ ಅವರು ತಮ್ಮ ಫಾರ್ಮ್ ಕಂಡುಕೊಳ್ಳಲು ಕಠಿಣ ಶ್ರಮಪಡುತ್ತಿದ್ದಾರೆ. ರೋಹಿತ್ ಹಿಂದಿನ 12 ಇನಿಂಗ್ಸ್ಗಳಲ್ಲಿ ಕೇವಲ ಒಂದು ಅರ್ಧಶತಕ(52ರನ್)ಸಹಿತ ಕೇವಲ 142 ರನ್ ಗಳಿಸಿದ್ದಾರೆ.
ತನ್ನ ಬ್ಯಾಟಿಂಗ್ ಲಯ ಕಂಡುಕೊಳ್ಳಲು ರೋಹಿತ್ ಅವರು ಸ್ಪಿನ್ ಹಾಗೂ ವೇಗದ ಬೌಲರ್ಗಳ ವಿರುದ್ಧ ಅಭ್ಯಾಸ ನಡೆಸಿದರು. ರೋಹಿತ್ 2ನೇ ಟೆಸ್ಟ್ ಪಂದ್ಯದಲ್ಲಿ 3 ಹಾಗೂ 6 ರನ್ ಗಳಿಸಿ ಔಟಾಗಿದ್ದರು.
ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರೆ, 2ನೇ ಇನಿಂಗ್ಸ್ನಲ್ಲಿ ಪ್ಯಾಟ್ಸ್ ಕಮಿನ್ಸ್ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡ್ ಆಗಿದ್ದರು.
ಆಸ್ಟ್ರೇಲಿಯ ಬೌಲಿಂಗ್ ದಾಳಿಯ ವಿರುದ್ದ ತನ್ನ ಟೆಕ್ನಿಕ್ ಅನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳುವ ಉದ್ದೇಶದಿಂದ ಪ್ರಾಕ್ಟೀಸ್ ಸಮಯದಲ್ಲಿ ಕೆ.ಎಲ್.ರಾಹುಲ್ ಡಿಫೆನ್ಸ್ನತ್ತ ಗಮನ ನೀಡಿದರು.
ಮೊದಲ ಟೆಸ್ಟ್ ಪಂದ್ಯದಲ್ಲಿ 161 ರನ್ ಗಳಿಸಿ ಭಾರತದ 295 ರನ್ ಗೆಲುವಿಗೆ ನೆರವಾಗಿದ್ದ ಯಶಸ್ವಿ ಜೈಸ್ವಾಲ್ ಅವರು ನೆಟ್ನಲ್ಲಿ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು.
ಬೌಲರ್ಗಳಾದ ಹರ್ಷಿತ್ ರಾಣಾ, ಆಕಾಶ್ ದೀಪ್, ಯಶ್ ದಯಾಳ್, ರವೀಂದ್ರ ಜಡೇಜ, ಆರ್.ಅಶ್ವಿನ್ ಹಾಗೂ ವಾಶಿಂಗ್ಟನ್ ಸುಂದರ್ ಅವರು ಅಭ್ಯಾಸದಲ್ಲಿ ಭಾಗವಹಿಸಿದ್ದು, ಬ್ಯಾಟರ್ಗಳಿಗೆ ವಿವಿಧ ಶೈಲಿಯ ಬೌಲಿಂಗ್ ಮಾಡಿದರು. ಹಲವು ಥ್ರೋಡೌನ್ ಸ್ಪೆಷಲಿಸ್ಟ್ಗಳು ಹಾಜರಾಗಿದ್ದರು.
ಭಾರತ ತಂಡವು ಮುಂದಿನ ಹಂತದ ತಯಾರಿಗಾಗಿ ಬುಧವಾರ ಬ್ರಿಸ್ಬೇನ್ಗೆ ಪ್ರಯಾಣಿಸಲಿದೆ. ಮುಂಬರುವ ಟೆಸ್ಟ್ನಲ್ಲಿ ಒಗ್ಗಟ್ಟಿನಿಂದ ಆಡುವ ಯೋಜನೆಯ ಜೊತೆಗೆ, ಅಡಿಲೇಡ್ನಲ್ಲಿ ಮಾಡಿರುವ ತಪ್ಪನ್ನು ತಿದ್ದಿಕೊಂಡು ವೇಗ ಹಾಗೂ ಬೌನ್ಸ್ಗೆ ಖ್ಯಾತಿ ಪಡೆದಿರುವ ಬ್ರಿಸ್ಬೇನ್ನ ವಿಭಿನ್ನ ವಾತಾವರಣಕ್ಕೆ ಹೊಂದಿಕೊಳ್ಳುವ ಗುರಿ ಇಟ್ಟುಕೊಂಡಿದೆ.