ಏಕದಿನ ಕ್ರಿಕೆಟ್ನಿಂದ ನಿವೃತ್ತಿ ವದಂತಿ ತಳ್ಳಿ ಹಾಕಿದ ವಿರಾಟ್ ಕೊಹ್ಲಿ, ರವೀಂದ್ರ ಜಡೇಜ

ರವೀಂದ್ರ ಜಡೇಜ , ವಿರಾಟ್ ಕೊಹ್ಲಿ| PC : PTI
ಹೊಸದಿಲ್ಲಿ: ದುಬೈನಲ್ಲಿ ರವಿವಾರ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 4 ವಿಕೆಟ್ಗಳ ಅಂತರದಿಂದ ಮಣಿಸಿದ ನಂತರ ತಮ್ಮ ನಿವೃತ್ತಿಯ ಕುರಿತ ಊಹಾಪೋಹವನ್ನು ಭಾರತದ ಬ್ಯಾಟಿಂಗ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜ ತಳ್ಳಿ ಹಾಕಿದ್ದಾರೆ.
ಆಟಗಾರನಾಗಿ ನಾಲ್ಕನೇ ಬಾರಿ ಐಸಿಸಿ ಪ್ರಶಸ್ತಿ ಗೆದ್ದಿರುವ ಕೊಹ್ಲಿ, ‘‘ನಾನು ಯುವ ಆಟಗಾರರೊಂದಿಗೆ ಮಾತನಾಡಲು ಬಯಸುವೆ. ನನ್ನ ಅನುಭವ ಹಂಚಿಕೊಳ್ಳಲು ಪ್ರಯತ್ನಿಸುವೆ, ಹೇಗೆ ದೀರ್ಘಸಮಯ ಆಡಬಹುದೆಂದೂ ಹೇಳಿಕೊಟ್ಟಿದ್ದೇನೆ. ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ ಹಲವು ಪರಿಣಾಮಕಾರಿ ಇನಿಂಗ್ಸ್ ಆಡಿದ್ದಾರೆ. ತಂಡವು ಉತ್ತಮ ಆಟಗಾರರ ಕೈಯ್ಯಲಿದೆ’’ ಎಂದರು.
ಜನವರಿಯಲ್ಲಿ ಅಂತ್ಯಗೊಂಡ ಆಸ್ಟ್ರೇಲಿಯ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಸೋತ ನಂತರ ತಂಡವು ಯಶಸ್ಸಿಗಾಗಿ ಹಸಿದಿತ್ತು ಎಂಬುದನ್ನು 36ರ ಹರೆಯದ ಕೊಹ್ಲಿ ಒಪ್ಪಿಕೊಂಡರು.
‘‘ಕಠಿಣ ಆಸ್ಟ್ರೇಲಿಯ ಪ್ರವಾಸದ ನಂತರ ನಾವು ಪುಟಿದೇಳಲು ಬಯಸಿದ್ದೆವು. ಅದ್ಭುತ ಆಟಗಾರರೊಂದಿಗೆ ಆಡುವುದಕ್ಕೆ ಖುಷಿಯಾಗುತ್ತದೆ. ಎಲ್ಲರೂ ತಂಡವನ್ನು ಸರಿಯಾದ ದಿಕ್ಕಿನತ್ತ ಒಯ್ಯುತ್ತಿದ್ದಾರೆ. ಪ್ರಶಸ್ತಿಗಳನ್ನು ಗೆಲ್ಲಲು ಇಡೀ ತಂಡ ವಿವಿಧ ಪಂದ್ಯಗಳಲ್ಲಿ ಪುಟಿದೆದ್ದಿದೆ. ಎಲ್ಲ ಆಟಗಾರರು ಪರಿಣಾಮಕಾರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಸಂಘಟಿತ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ನಾವು ಪ್ರಶಸ್ತಿ ಗೆದ್ದಿದ್ದೇವೆ’’ಎಂದು ಕೊಹ್ಲಿ ಹೇಳಿದ್ದಾರೆ.
ನ್ಯೂಝಿಲ್ಯಾಂಡ್ ತುಂಬಾ ಸ್ಪರ್ಧಾತ್ಮಕ ತಂಡವಾಗಿದ್ದು, ತನ್ನ ಯೋಜನೆಯನ್ನು ಚೆನ್ನಾಗಿ ಕಾರ್ಯರೂಪಕ್ಕೆ ತರುತ್ತದೆ. ನನ್ನ ಸ್ನೇಹಿತ ಕೇನ್ ವಿಲಿಯಮ್ಸನ್ ತಂಡ ಸೋತಿರುವುದಕ್ಕೆ ಬೇಸರವಾಗುತ್ತಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಟ್ರೋಫಿ ಗೆದ್ದ ಬೆನ್ನಿಗೇ ಕೊಹ್ಲಿ ಟಿ-20 ಅಂತರ್ರಾಷ್ಟ್ರೀಯ ಪಂದ್ಯದಿಂದ ನಿವೃತ್ತಿಯಾಗಿದ್ದರು.
*ಅನಗತ್ಯ ವದಂತಿಗಳು: ರವೀಂದ್ರ ಜಡೇಜ
ಭಾರತ ತಂಡವು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡ ನಂತರ ನಿವೃತ್ತಿಯ ವದಂತಿಗಳನ್ನು ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ ಕೂಡ ತಳ್ಳಿ ಹಾಕಿದರು.
ಭಾರತದ ಹಿರಿಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜ ಹಾಗೂ ಮುಹಮ್ಮದ್ ಶಮಿ ನಿವೃತ್ತಿಯಾಗುವ ಸಾಧ್ಯತೆ ಇದೆ ಎಂಬ ಬಗ್ಗೆ ಊಹಾಪೋಹ ಹರಡಿತ್ತು.
ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಭಾರತ ತಂಡ ಜಯ ಸಾಧಿಸಿದ ನಂತರ ಕೊಹ್ಲಿ ಹಾಗೂ ರೋಹಿತ್ ನಿವೃತ್ತಿಯ ವದಂತಿಯನ್ನು ಅಲ್ಲಗಳೆದಿದ್ದರು. ಅದೇ ರೀತಿ ಜಡೇಜ ಅವರು ಸೋಮವಾರ ತನ್ನ ಇನ್ಸ್ಟಾಗ್ರಾಮ್ನಲ್ಲಿ ನಿವೃತ್ತಿಗೆ ಸಂಬಂಧಿಸಿ ತನ್ನ ನಿಲುವನ್ನು ಸ್ಪಷ್ಟಪಡಿಸಿದರು.
ದುಬೈ ಅಂತರ್ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಜಡೇಜ ತನ್ನ 10 ಓವರ್ಗಳ ಬೌಲಿಂಗ್ ಕೋಟಾವನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಿವೃತ್ತಿ ವದಂತಿ ಹೆಚ್ಚಾಗಿತ್ತು. ಜಡೇಜ ತನ್ನ ಕೊನೆಯ ಓವರ್ ಬೌಲಿಂಗ್ ಮಾಡಿದ ನಂತರ ಕೊಹ್ಲಿ ಅವರನ್ನು ಅಪ್ಪಿಕೊಂಡಿದ್ದರು. ಇದು ಜಡೇಜ ಅವರು ಏಕದಿನ ಕ್ರಿಕೆಟ್ನಿಂದ ನಿವೃತ್ತಿಯಾಗುತ್ತಾರೆಂಬ ಊಹಾಪೋಹಕ್ಕೆ ರೆಕ್ಕೆ ಪುಕ್ಕ ನೀಡಿತ್ತು.
ಫೈನಲ್ ಪಂದ್ಯದಲ್ಲಿ ಜಡೇಜ ಅಮೋಘ ಆಲ್ರೌಂಡ್ ಪ್ರದರ್ಶನ ನೀಡಿದ್ದು, ಅವರ ಬೌಲಿಂಗ್ ಪ್ರದರ್ಶನ ಗಮನಾರ್ಹವಾಗಿತ್ತು. ಬಿಗಿ ಬೌಲಿಂಗ್ ಮಾಡಿದ್ದ ಅವರು 10 ಓವರ್ಗಳಲ್ಲಿ ಕೇವಲ 30 ರನ್ ನೀಡಿದ್ದಲ್ಲದೆ ಟಾಮ್ ಲ್ಯಾಥಮ್ ವಿಕೆಟನ್ನು ಪಡೆದಿದ್ದರು.
ಬ್ಯಾಟಿಂಗ್ನಲ್ಲಿ 6 ಎಸೆತಗಳನ್ನು ಎದುರಿಸಿದ್ದ ಜಡೇಜ 9 ರನ್ ಗಳಿಸಿದ್ದರು. ಭಾರತದ ಪರ ಗೆಲುವಿನ ರನ್ ದಾಖಲಿಸಿದರು.
ಭಾರತವು ಸ್ಮರಣೀಯ ಗೆಲುವು ದಾಖಲಿಸಿದ ನಂತರ ಜಡೇಜ ಅವರು ಹರ್ಷಿತ್ ರಾಣಾ ಹಾಗೂ ಅರ್ಷದೀಪ್ ಸಿಂಗ್ ಜೊತೆಗೂಡಿ ‘ಗಂಗ್ನಮ್ ಶೈಲಿ’ಯಲ್ಲಿ ನೃತ್ಯ ಮಾಡಿದರು.