ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ ʼಕಿಂಗ್ʼ ಕೊಹ್ಲಿಯ ದಾಖಲೆಗಳೇನು?: ಇಲ್ಲಿದೆ ಮಾಹಿತಿ...
ವಿರಾಟ್ ಕೊಹ್ಲಿ (Photo:X/BCCI)
ಶನಿವಾರ ಭಾರತವನ್ನು ತೀರಾ ಕಠಿಣ ಪರಿಸ್ಥಿತಿಯಿಂದ ವಿರಾಟ್ ಕೊಹ್ಲಿ ಹೊರ ತಂದ ಹಾಗೆ ಇನ್ನು ಮುಂದೆ ಯಾರು ಹೊರ ತರುತ್ತಾರೆ ಎಂಬ ಪ್ರಶ್ನೆ ಕೋಟ್ಯಾಂತರ ಭಾರತೀಯರ ಮುಂದಿದೆ. ವಿಶ್ವಕಪ್ ಗೆದ್ದ ಖುಷಿ ಒಂದು ಕಡೆಯಾದರೆ ವಿಶ್ವ ಕ್ರಿಕೆಟ್ ನ ಶ್ರೇಷ್ಠ ಪ್ರತಿಭೆ, ಎಲ್ಲ ಕ್ರಿಕೆಟ್ ಅಭಿಮಾನಿಗಳ ಕಣ್ಮಣಿ ಇನ್ನು ಮುಂದೆ ಟಿ20 ರಾಷ್ಟ್ರೀಯ ತಂಡದಲ್ಲಿ ಆಡುವುದಿಲ್ಲ ಎಂಬ ಬೇಸರ ಇನ್ನೊಂದೆಡೆ.
ಇಂದು ಟಿ20 ವಿಶ್ವಕಪ್ ಮಾತ್ರವಲ್ಲದೇ ವಿರಾಟ್ ಕೊಹ್ಲಿ ಅವರ ಭವ್ಯ ಟಿ20 ಅಂತಾರಾಷ್ಟ್ರೀಯ ವೃತ್ತಿ ಜೀವನವನ್ನು ಸಂಭ್ರಮಿಸುವ ದಿನ. ವಿರಾಟ್ ಕೊಹ್ಲಿ ಅಂದ್ರೆ ಕ್ರಿಕೆಟ್ ನಲ್ಲಿ ದಾಖಲೆಗಳ ಮಹಾ ಸಮುದ್ರ. ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನೂ ಮುರಿದಿರುವ ವಿರಾಟ್ ಅಭಿಮಾನಿಗಳ ಮೆಚ್ಚಿನ ಕಿಂಗ್ ಕೊಹ್ಲಿ ಆಗಿದ್ದಾರೆ.
ವಿರಾಟ್ ಕೊಹ್ಲಿಯ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದ ಕೆಲವು ವಿಶೇಷ ದಾಖಲೆಗಳು ಇಲ್ಲಿವೆ:
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವವರು ವಿರಾಟ್ ಕೊಹ್ಲಿ. ಆಡಿದ 125 ಪಂದ್ಯಗಳಲ್ಲಿ 16 ಪಂದ್ಯಗಳಲ್ಲಿ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಅತೀ ಹೆಚ್ಚು ಅಂದ್ರೆ 7 ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಕೊಹ್ಲಿಗೆ ಸೇರಿದೆ.
ನಿನ್ನೆಯ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ಅವರು ಎಂಎಸ್ ಧೋನಿ ನಂತರ ಐಸಿಸಿ ಟ್ರೋಫಿಗಳ ಟ್ರಿಪಲ್ ಅಂದರೆ ODI ವಿಶ್ವಕಪ್, T20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಮೂರನ್ನೂ ಗೆದ್ದಿರುವ ಎರಡನೇ ಭಾರತೀಯ ಆಟಗಾರರಾದರು.
ಕೊಹ್ಲಿ ತಮ್ಮ 125 ಪಂದ್ಯಗಳ T20I ವೃತ್ತಿಜೀವನವನ್ನು ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಕೊನೆಗೊಳಿಸಿದರು. ಟಿ20 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 4188 ರನ್ ಗಳಿಸಿರುವ ವಿರಾಟ್ 48.69 ರ ಸರಾಸರಿ ಮತ್ತು 137.04 ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅತೀ ಹೆಚ್ಚು ಅಂದ್ರೆ 369 ಬೌಂಡರಿಗಳನ್ನು ಬಾರಿಸಿರುವ ದಾಖಲೆಯೂ ವಿರಾಟ್ ಹೆಸರಲ್ಲೇ ಇದೆ.
ಇನ್ನು ಟಿ20 ವಿಶ್ವಕಪ್ ಗಳಲ್ಲಿ ವಿರಾಟ್ ಸಾಧನೆಗಳು ಅನನ್ಯ.
ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ (1292) ಗಳಿಸಿದ ಆಟಗಾರನಾಗಿ ಕೊಹ್ಲಿ ತಮ್ಮ T20 ಅಂತರ್ ರಾಷ್ಟ್ರೀಯ ವೃತ್ತಿಜೀವನವನ್ನು ಮುಗಿಸಿದ್ದಾರೆ. 35 ವರ್ಷದ ವಿರಾಟ್ 58.72 ರ ಸರಾಸರಿಯಲ್ಲಿ ಈ 1292 ರನ್ ಗಳಿಸಿದ್ದಾರೆ.
ಟಿ20 ವಿಶ್ವಕಪ್ ಫೈನಲ್ನಲ್ಲಿ ಒಂದಕ್ಕಿಂತ ಹೆಚ್ಚು ಅರ್ಧಶತಕಗಳನ್ನು ದಾಖಲಿಸಿದ ಪಟ್ಟಿಯಲ್ಲಿ ಮಾರ್ಲನ್ ಸ್ಯಾಮ್ಯುಯೆಲ್ಸ್ ಮತ್ತು ಕುಮಾರ್ ಸಂಗಕ್ಕಾರ ಅವರನ್ನು ಕೊಹ್ಲಿ ಸೇರಿಕೊಂಡರು.
T20 ವಿಶ್ವಕಪ್ 2024ರ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧದ ವೈಫಲ್ಯವನ್ನು ಹೊರತುಪಡಿಸಿ, ಕೊಹ್ಲಿ ಅವರು ಆಡಿದ ಪ್ರತಿ T20 ವಿಶ್ವಕಪ್ ನಾಕೌಟ್ ಪಂದ್ಯದಲ್ಲೂ ಅರ್ಧಶತಕ ಗಳಿಸಿದ್ದರು. ಆರು ಪಂದ್ಯಗಳಲ್ಲಿ 5 ಅರ್ಧ ಶತಕ ಬಾರಿಸಿದ್ದಾರೆ.
2014 ಮತ್ತು 2016 ರ T20 ವಿಶ್ವಕಪ್ ನಲ್ಲಿ ಕೊಹ್ಲಿ ʼಮಾನ್ ಆಫ್ ದಿ ಟೂರ್ನಮೆಂಟ್ʼ ಪ್ರಶಸ್ತಿಗೆ ಪಾತ್ರರಾಗಿದ್ದರು.
ನಿನ್ನೆ ವಿಶ್ವಕಪ್ ಗೆದ್ದ ಬಳಿಕ ಟಿ20 ಕ್ರಿಕೆಟ್ ಗೆ ವಿರಾಟ್ ವಿದಾಯ ಹೇಳಿದರು.