ಇಂಗ್ಲೆಂಡ್ ವಿರುದ್ಧದ 3ನೇ, 4ನೇ ಟೆಸ್ಟ್ ಪಂದ್ಯಕ್ಕೂ ವಿರಾಟ್ ಕೊಹ್ಲಿ ಅಲಭ್ಯ: ವರದಿ
ವಿರಾಟ್ ಕೊಹ್ಲಿ | Photo: PTI
ಹೊಸದಿಲ್ಲಿ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಕ್ರಮವಾಗಿ ರಾಜ್ಕೋಟ್ ಹಾಗೂ ರಾಂಚಿಯಲ್ಲಿ ನಡೆಯಲಿರುವ ಮೂರನೇ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎಂದು espncricinfo.com ಬುಧವಾರ ವರದಿ ಮಾಡಿದೆ.
ವೈಯಕ್ತಿಕ ಕಾರಣಗಳಿಂದಾಗಿ ವಿರಾಟ್ ಈ ಮೊದಲು ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ಹಿಂದೆ ಸರಿದಿದ್ದರು. ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಅಲಭ್ಯತೆಯು ಟೀಮ್ ಇಂಡಿಯಾಕ್ಕೆ ಖಂಡಿತವಾಗಿಯೂ ಕಳವಳ ಉಂಟು ಮಾಡಲಿದೆ.
ಮೂರನೇ ಟೆಸ್ಟ್ ಪಂದ್ಯವನ್ನು ಫೆಬ್ರವರಿ 15ರಿಂದ ರಾಜ್ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್ನಲ್ಲಿ ಆಡಲಾಗುತ್ತದೆ. 4ನೇ ಟೆಸ್ಟ್ ಪಂದ್ಯಕ್ಕೆ ರಾಂಚಿಯ ಐಎಸ್ಸಿಎ ಇಂಟರ್ನ್ಯಾಶನಲ್ ಸ್ಟೇಡಿಯಮ್ ಫೆ.23ರಂದು ಆತಿಥ್ಯವಹಿಸಲಿದೆ.
ಮಾರ್ಚ್ 6ರಿಂದ ಧರ್ಮಶಾಲಾದಲ್ಲಿ ಆರಂಭವಾಗಲಿರುವ ಐದನೇ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಲಭ್ಯತೆಯ ಕುರಿತು ಅನುಮಾನಗಳಿವೆ.
ಆಯ್ಕೆ ಸಮಿತಿಯು ಈ ವಾರ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸುವ ನಿರೀಕ್ಷೆ ಇದೆ.
ಸ್ಪಷ್ಟ ಚಿತ್ರಣ ಪಡೆಯಲು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅಥವಾ ಬಿಸಿಸಿಐನ ಉನ್ನತ ಅಧಿಕಾರಿಗಳು ಕೊಹ್ಲಿ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.
ಗಾಯದ ಸಮಸ್ಯೆಯಿಂದಾಗಿ ಎರಡನೇ ಟೆಸ್ಟ್ ನಿಂದ ಹೊರಗುಳಿದಿದ್ದ ಪ್ರಮುಖ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ರವೀಂದ್ರ ಜಡೇಜ ಮೂರನೇ ಟೆಸ್ಟ್ ಗೆ ಲಭ್ಯವಿರುವ ನಿರೀಕ್ಷೆ ಇದೆ ಎಂಬ ವಿಚಾರವು ಟೀಮ್ ಇಂಡಿಯಾಕ್ಕೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಕೊಹ್ಲಿ ಟೆಸ್ಟ್ ನಿಂದ ಹೊರಗುಳಿಯಲು ವೈಯಕ್ತಿಕ ಕಾರಣವೆಂದರೆ ಅವರ ಎರಡನೇ ಮಗುವಿನ ಆಗಮನವಾಗುತ್ತಿರುವುದು ಎಂದು ಕೊಹ್ಲಿ ಅವರ ಆತ್ಮೀಯ ಸ್ನೇಹಿತ ಹಾಗೂ ಆರ್ಸಿಬಿಯ ಮಾಜಿ ಸಹ ಆಟಗಾರ ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಬಹಿರಂಗಪಡಿಸಿದ್ದಾರೆ.
ವಿಶ್ರಾಂತಿ ಪಡೆಯುವ ಮೂಲಕ ಕೊಹ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.