ರಣಜಿ ಪಂದ್ಯದಲ್ಲಿ ಆಡುವ ಮೂಲಕ ದೇಶೀಯ ಕ್ರಿಕೆಟ್ ಗೆ ಮರಳಿದ ವಿರಾಟ್ ಕೊಹ್ಲಿ
►ಕಿಕ್ಕಿರಿದು ತುಂಬಿದ ಅರುಣ್ ಜೇಟ್ಲಿ ಕ್ರೀಡಾಂಗಣ ► ‘RCB, RCB’ ಎಂದು ಕೂಗಿದ ಅಭಿಮಾನಿಗಳು

ವಿರಾಟ್ ಕೊಹ್ಲಿ (Photo: PTI)
ಹೊಸದಿಲ್ಲಿ: 13 ವರ್ಷಗಳ ನಂತರ ವಿರಾಟ್ ಕೊಹ್ಲಿ ರಣಜಿ ಪಂದ್ಯದಲ್ಲಿ ಆಡುತ್ತಿರುವುದರಿಂದ ರೋಮಾಂಚಿತರಾಗಿರುವ ಅವರ ಅಭಿಮಾನಿಗಳು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಜಮಾಯಿಸಿದ್ದು, ವಿರಾಟ್ ಕೊಹ್ಲಿ ಪರ ‘RCB, RCB’ ಎಂಬ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು. ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆಯ ಭಾಗವಾಗಿ ರೈಲ್ವೇಸ್ ಹಾಗೂ ದಿಲ್ಲಿ ತಂಡಗಳ ನಡುವೆ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ದಿಲ್ಲಿ ತಂಡದ ಪರವಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿದಿದ್ದಾರೆ.
ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಒಕ್ಕೂಟವು ಪ್ರೇಕ್ಷಕರಿಗೆ ಉಚಿತ ಪ್ರವೇಶವನ್ನು ಒದಗಿಸಿದ್ದು, ಅದಕ್ಕಾಗಿ ಆಧಾರ್ ಕಾರ್ಡ್ ಮತ್ತು ಅದರ ನಕಲು ಪ್ರತಿ ಮಾತ್ರ ಅಗತ್ಯವಾಗಿದೆ. ಅಭಿಮಾನಿಗಳಿಗೆ ಗೌತಮ್ ಗಂಭೀರ್ ಸ್ಟ್ಯಾಂಡ್ ಅನ್ನು ಮೀಸಲಿಡಲಾಗಿದ್ದು, ಅವರಿಗೆ ಗೇಟ್ ಸಂಖ್ಯೆ 16 ಹಾಗೂ 17ರ ಮೂಲಕ ಪ್ರವೇಶಾವಕಾಶ ಒದಗಿಸಲಾಗಿದೆ. ಗೇಟ್ ಸಂಖ್ಯೆ ಆರನ್ನು ಡಿಡಿಸಿಎ ಸದಸ್ಯರು ಹಾಗೂ ಅತಿಥಿಗಳಿಗೆ ಮೀಸಲಿರಿಸಲಾಗಿದೆ.
ರಣಜಿ ಪಂದ್ಯದ ಮೊದಲ ದಿನದಾಟದಂದು 10,000 ಅಭಿಮಾನಿಗಳನ್ನು ನಿರೀಕ್ಷಿಸಲಾಗಿದ್ದು, ಐಪಿಎಲ್ ಪಂದ್ಯಕ್ಕೆ ಮಾಡುವ ವ್ಯವಸ್ಥೆಗೆ ಸರಿಹೊಂದುವಂಥ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಡಿಡಿಸಿಎ ಕಾರ್ಯದರ್ಶಿ ಅಶೋಕ್ ಕುಮಾರ್ ಶರ್ಮ ತಿಳಿಸಿದ್ದಾರೆ.
2012ರಲ್ಲಿ ಕಡೆಯದಾಗಿ ವೀರೇಂದ್ರ ಸೆಹ್ವಾಗ್ ನಾಯಕತ್ವದಲ್ಲಿ ರಣಜಿ ಪಂದ್ಯದಲ್ಲಿ ಆಡಿದ್ದ ವಿರಾಟ್ ಕೊಹ್ಲಿ, ಈ ಪಂದ್ಯದ ಮೂಲಕ ತಮ್ಮ ಲಯವನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ. 2020ರಿಂದ ಇಲ್ಲಿಯವರೆಗೆ 30.72 ಸರಾಸರಿಯಲ್ಲಿ ಕೇವಲ ಮೂರು ಶತಕಗಳೊಂದಿಗೆ 2,028 ರನ್ ಗಳನ್ನು ಮಾತ್ರ ವಿರಾಟ್ ಕೊಹ್ಲಿ ಗಳಿಸಿದ್ದಾರೆ. 2023-25 ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಋತುವಿನಲ್ಲಿ 32.65 ರನ್ ಸರಾಸರಿಯೊಂದಿಗೆ 14 ಪಂದ್ಯಗಳಲ್ಲಿ ಕೇವಲ 751 ರನ್ ಗಳಿಸಿದ್ದಾರೆ.