ನ್ಯೂಝಿಲೆಂಡ್ ವಿರುದ್ಧದ ಗೆಲುವಿನ ರೂವಾರಿ ಕೊಹ್ಲಿ ದಾಖಲೆಗಳ ಸರದಾರ
Photo: twitter.com/BCCI
ಮುಂಬೈ: ವಿಶ್ವಕಪ್ ಅಭಿಯಾನದಲ್ಲಿ ಸತತ ಐದನೇ ಜಯ ದಾಖಲಿಸುವಲ್ಲಿ 95 ರನ್ ಸಿಡಿಸಿ ಗಣನೀಯ ಕೊಡುಗೆ ನೀಡಿದ ವಿರಾಟ್ ಕೊಹ್ಲಿ, 49 ಏಕದಿನ ಶತಕಗಳನ್ನು ಬಾರಿಸಿದ ಸಚಿನ್ ದಾಖಲೆ ಸರಿಗಟ್ಟುವ ಹೊಸ್ತಿಲಲ್ಲಿ ಎಡವಿದರು. 5 ರನ್ ಅಂತರದಿಂದ ಶತಕ ವಂಚಿತರಾದರೂ, ಇತರ ಹಲವು ದಾಖಲೆಗಳನ್ನು ರವಿವಾರದ ಪಂದ್ಯದಲ್ಲಿ ಬರೆದರು.
ಆದರೆ ಐಸಿಸಿ ಬಿಳಿ-ಚೆಂಡು ಟೂರ್ನಿಗಳಲ್ಲಿ 3 ಸಾವಿರ ರನ್ ಗಳನ್ನು ಗಳಿಸಿದ ಪ್ರಪ್ರಥಮ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರಲ್ಲಿ 50 ಓವರ್ ಗಳ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಒಳಗೊಳ್ಳುತ್ತದೆ. 31 ವಿಶ್ವಕಪ್ ಪಂದ್ಯಗಳಲ್ಲಿ ಕೊಹ್ಲಿ 1385 ರನ್ ಗಳನ್ನು ಕಲೆಹಾಕಿದ್ದು, 55.36ರ ರನ್ ಸರಾಸರಿ ಹೊಂದಿದ್ದಾರೆ. ವಿಶ್ವಕಪ್ ದಾಖಲೆಗಳಲ್ಲಿ ಮೂರು ಶತಕ ಹಾಗೂ ಒಂಬತ್ತು ಅರ್ಧ ಶತಕಗಳು ಸೇರಿವೆ. ಗರಿಷ್ಠ ಸ್ಕೋರ್ 107.
ಈ ಸಾಧನೆಯಿಂದಾಗಿ ಅವರು ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪೈಕಿ ನಾಲ್ಕನೇ ಆಟಗಾರ ಹಾಗೂ ಭಾರತದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲೂ ದಾಖಲೆ ಹೊಂದಿದ್ದಾರೆ. ಈ ಟೂರ್ನಿಯ 12 ಇನಿಂಗ್ಸ್ ಗಳಲ್ಲಿ ಐದು ಅರ್ಧಶತಕ ಸಹಿತ 88.16 ಸರಾಸರಿಯೊಂದಿಗೆ 529 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಇವರ ಗರಿಷ್ಠ ಸ್ಕೋರ್ 96. ಅಂತೆಯೇ 27 ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಕೊಹ್ಲಿ 81.50 ಸರಾಸರಿಯ ಮೂಲಕ 1141 ರನ್ ಗಳಿಸಿದ್ದಾರೆ.
ಬಿಳಿಚೆಂಡು ವಿಭಾಗದ ದಂತಕಥೆ ಎನಿಸಿದ ಕ್ರಿಸ್ ಗೇಲ್ ಈ ನಿಟ್ಟಿನಲ್ಲಿ ಕೊಹ್ಲಿಯವರ ನಂತರದ ಸ್ಥಾನದಲ್ಲಿದ್ದಾರೆ. ಅವರು ವಿಶ್ವಕಪ್ ನಲ್ಲಿ 1186, ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 791 ಹಾಗೂ ಐಸಿಸಿ ಟಿ20 ವಿಶ್ವಕಪ್ ನಲ್ಲಿ 965 ರನ್ ಗಳಿಸಿದ್ದಾರೆ.
ಜತೆಗೆ ಏಕದಿನ ಪಂದ್ಯದಲ್ಲಿ 13430 ರನ್ ಗಳಿಸಿದ ಶ್ರೀಲಂಕಾದ ಸನತ್ ಜಯಸೂರ್ಯ ದಾಖಲೆ ಪುಡಿಗಟ್ಟಿದ ಕೊಹ್ಲಿ ಗರಿಷ್ಠ ಸ್ಕೋರರ್ ಗಳ ಪೈಕಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. 286 ಏಕದಿನ ಪಂದ್ಯಗಳಲ್ಲಿ ಕೊಹ್ಲಿ 93.69 ಸರಾಸರಿಯೊಂದಿಗೆ 13437 ರನ್ ಗಳಿಸಿದ್ದಾರೆ. ಇದರಲ್ಲಿ 48 ಶತಕಗಳು ಮತ್ತು 69 ಅರ್ಧಶತಕಗಳು ಸೇರಿವೆ. ಇವರ ಗರಿಷ್ಠ ಸ್ಕೋರ್ 183.
ಸಚಿನ್ ತೆಂಡೂಲ್ಕರ್ 18426 ರನ್ ಗಳೊಂದಿಗೆ ಅಗ್ರಸ್ಥಾನಿಯಾಗಿದ್ದಾರೆ. ಗರಿಷ್ಠ ಅಂದರೆ 49 ಶತಕಗಳನ್ನು ಗಳಿಸಿದ ದಾಖಲೆ ಸಚಿನ್ ಅವರದ್ದಾಗಿದೆ.