ವಿರಾಟ್ ಕೊಹ್ಲಿಯ ʼದಾಖಲೆʼಯ ಸ್ಟೇಡಿಯಂ ಅಡಿಲೇಡ್
ವಿರಾಟ್ ಕೊಹ್ಲಿ | PC : PTI
ಹೊಸದಿಲ್ಲಿ : ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಸ್ಟ್ರೇಲಿಯದಲ್ಲಿ ಉತ್ತಮ ನಿರ್ವಹಣೆ ನೀಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಪರ್ತ್ನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ನಲ್ಲೂ ಅವರು ಈ ಪರಂಪರೆಯನ್ನು ಮುಂದುವರಿಸಿದರು. ಆ ಪಂದ್ಯದಲ್ಲಿ ಅವರು ಭವ್ಯ ಶತಕವೊಂದನ್ನು ಬಾರಿಸಿದರು.
ಆ ಪಂದ್ಯದ ಮೂಲಕ ಅವರು ಮತ್ತೆ ಫಾರ್ಮ್ಗೆ ಮರಳಿದರು. ಇದಕ್ಕೂ ಮೊದಲು, ಕಳೆದ ವರ್ಷ ಪೋರ್ಟ್ ಆಫ್ ಸ್ಪೇನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವರು ಬಾರಿಸಿದ್ದ ಶತಕ ಕೊನೆಯದಾಗಿತ್ತು.
ಕೊಹ್ಲಿ ಈಗ ಎರಡನೇ ಟೆಸ್ಟ್ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಎರಡನೇ ಟೆಸ್ಟ್ ಪಂದ್ಯವು ಶುಕ್ರವಾರ ಅಡಿಲೇಡ್ನಲ್ಲಿ ಆರಂಭಗೊಳ್ಳಲಿದೆ. ಆಸ್ಟ್ರೇಲಿಯದ ಇತರ ಮೈದಾನಗಳಲ್ಲಿ ಗಳಿಸಿದ್ದಕ್ಕಿಂತಲೂ ಹೆಚ್ಚಿನ ಯಶಸ್ಸನ್ನು ಕೊಹ್ಲಿ ಅಡಿಲೇಡ್ನಲ್ಲಿ ಗಳಿಸಿದ್ದಾರೆ.
‘‘ಈ ಮೈದಾನದಲ್ಲಿ ಆಡುವುದನ್ನು ನಾನು ಇಷ್ಟಪಡುತ್ತೇನೆ’’ ಎಂದು ಕೊಹ್ಲಿ 2022 ನವೆಂಬರ್ನಲ್ಲಿ ಅಡಿಲೇಡ್ ಓವಲ್ನಲ್ಲಿ ಹೇಳಿದ್ದರು.
ಕೊಹ್ಲಿ ಅಡಿಲೇಡ್ ಓವಲ್ನಲ್ಲಿ ಕ್ರಿಕೆಟ್ನ ಎಲ್ಲಾ ಮಾದರಿಗಳಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು ಅಲ್ಲಿ ಒಟ್ಟು 15 ಇನಿಂಗ್ಸ್ಗಳನ್ನು ಆಡಿದ್ದು, 73.61ರ ಸರಾಸರಿಯಲ್ಲಿ 957 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ 5 ಶತಕಗಳು ಮತ್ತು 4 ಅರ್ಧ ಶತಕಗಳು ಇವೆ.
ಆಸ್ಟ್ರೇಲಿಯದ ಕ್ರಿಕೆಟಿಗರನ್ನು ಹೊರತುಪಡಿಸಿ, ಬೇರೆ ದೇಶಗಳ ಕ್ರಿಕೆಟಿಗರ ಪೈಕಿ ಕೊಹ್ಲಿ ಗರಿಷ್ಠ ಶತಕಗಳನ್ನು ಈ ಮೈದಾನದಲ್ಲಿ ಬಾರಿಸಿದ್ದಾರೆ.
ಟೆಸ್ಟ್ ಪಂದ್ಯಗಳಲ್ಲಿ, ಕೊಹ್ಲಿ ಈ ಮೈದಾನದಲ್ಲಿ 8 ಇನಿಂಗ್ಸ್ಗಳಲ್ಲಿ 63.62ರ ಸರಾಸರಿಯಲ್ಲಿ 509 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಮತ್ತು ಒಂದು ಅರ್ಧ ಶತಕವಿದೆ.
ಏಕದಿನ ಪಂದ್ಯಗಳಲ್ಲಿ ಅವರು 4 ಇನಿಂಗ್ಸ್ಗಳಲ್ಲಿ 61ರ ಸರಾಸರಿಯಲ್ಲಿ 244 ರನ್ಗಳನ್ನು ಮಾಡಿದ್ದಾರೆ. ಇದರಲ್ಲಿ ಎರಡು ಶತಕಗಳಿವೆ. ಅಂತರ್ರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ, ಕೊಹ್ಲಿ 3 ಇನಿಂಗ್ಸ್ಗಳಿಂದ 204 ರನ್ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕಗಳಿವೆ.