ಮೊದಲ ಇನಿಂಗ್ಸ್ ನಲ್ಲಿ 70-80 ರನ್ ಗಳನ್ನು ನಾವು ಬಿಟ್ಟು ಬಿಟ್ಟೆವು: ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್ | Photo : X
ಹೈದರಾಬಾದ್: ಮೊದಲ ಇನಿಂಗ್ಸ್ ನಲ್ಲಿ ಗಳಿಸಬಹುದಾದ ರನ್ ಗಳನ್ನು ಗಳಿಸಲು ಮತ್ತು ಉತ್ತಮ ಆರಂಭಗಳ ಲಾಭ ಪಡೆಯಲು ವಿಫಲವಾಗಿರುವುದು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿನ ನಮ್ಮ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಹೈದರಾಬಾದ್ ನಲ್ಲಿ ನಡೆದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ನ ನಾಲ್ಕನೇ ದಿನವಾದ ರವಿವಾರ ಭಾರತವು 28 ರನ್ ಗಳ ಸೋಲನುಭವಿಸಿದೆ.
ಇಂಗ್ಲೆಂಡ್ ನ ಮೊದಲ ಇನಿಂಗ್ ನನ್ನು ಭಾರತೀಯ ಸ್ಪಿನ್ನರ್ಗಳು 246 ರನ್ ಗಳಿಗೆ ಮುಗಿಸಿದ ಬಳಿಕ, ಯಶಸ್ವಿ ಜೈಸ್ವಾಲ್ (80), ಕೆ.ಎಲ್. ರಾಹುಲ್ (86) ಮತ್ತು ರವೀಂದ್ರ ಜಡೇಜ (87) ಭಾರತವನ್ನು 436 ರನ್ ಗಳ ಬೃಹತ್ ಮೊದಲ ಇನಿಂಗ್ಸ್ ಮೊತ್ತದತ್ತ ಮುನ್ನಡೆಸಿದರು.
ಈ ಮೂವರೂ ಬ್ಯಾಟರ್ಗಳು ಬೃಹತ್ ವೈಯಕ್ತಿಕ ಮೊತ್ತಗಳನ್ನು ಗಳಿಸುವ ಸೂಚನೆಯನ್ನು ನೀಡಿದರಾದರೂ, ಅಂತಿಮವಾಗಿ ಶತಕದ ಗಡಿಯನ್ನು ತಲುಪಲು ಸಾಧ್ಯವಾಗಲಿಲ್ಲ.
ಪಂದ್ಯ ನಂತರದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ದ್ರಾವಿಡ್ ಈ ಅಂಶವನ್ನು ಪ್ರಸ್ತಾಪಿಸಿದರು. ‘‘ಮೊದಲ ಇನಿಂಗ್ಸ್ನಲ್ಲಿ ನಾವು 70 ರನ್ ಗಳ ಕೊರತೆ ಅನುಭವಿಸಿದೆವು ಎಂದು ನನಗನಿಸುತ್ತದೆ. ಪಂದ್ಯದ ಎರಡನೇ ದಿನದಂದು ಬ್ಯಾಟಿಂಗ್ ಗೆ ಪರಿಸ್ಥಿತಿಯು ಪೂರಕವಾಗಿದ್ದಾಗ, ನಾವು ಅದನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.
‘‘ನಾವು ಶತಕಗಳನ್ನು ಗಳಿಸಲಿಲ್ಲ. ನಮ್ಮಲ್ಲಿ ಯಾರೂ ದೊಡ್ಡ ಶತಕವೊಂದನ್ನು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಹಾಗಾಗಿ, ಮೊದಲ ಇನಿಂಗ್ಸ್ನಲ್ಲಿ 70-80 ರನ್ ಗಳನ್ನು ನಾವು ಕಳೆದುಕೊಂಡೆವು ಎಂದು ಅನಿಸುತ್ತದೆ. ಎರಡನೇ ಇನಿಂಗ್ಸ್ ಯಾವಾಗಲೂ ಸವಾಲಿನದೇ ಆಗಿರುತ್ತದೆ. ಅದು ಕಠಿಣವಾಗಿತ್ತು. 230 ರನ್ ಗಳ ಗುರಿಯನ್ನು ಬೆನ್ನತ್ತುವುದು ಸುಲಭವಲ್ಲ’’ ಎಂದು ದ್ರಾವಿಡ್ ನುಡಿದರು.
ಪ್ರಸಕ್ತ ತಂಡದಲ್ಲಿ ತುಂಬಾ ಯುವ ಆಟಗಾರರಿದ್ದಾರೆ. ದೀರ್ಘ ಇನಿಂಗ್ಸ್ ಗಳನ್ನು ಆಡುವುದನ್ನು ಅವರು ಈಗಲೂ ಕಲಿಯುತ್ತಿದ್ದಾರೆ ಎಂದು ಅವರು ಹೇಳಿದರು.
‘‘ತುಂಬಾ ಆಟಗಾರರು ಎಳೆಯರು. ಅಂದರೆ ಅವರ ಪೈಕಿ ಹೆಚ್ಚಿನವರು ಕಿರು ಮಾದರಿಗಳ ಕ್ರಿಕೆಟನ್ನು ಹೆಚ್ಚಾಗಿ ಆಡುತ್ತಾರೆ. ಅದೂ ಅಲ್ಲದೆ, ಮೊದಲ ದರ್ಜೆಯ ಕ್ರಿಕೆಟ್ ಆಡಲು ಅವರಿಗೆ ಹೆಚ್ಚು ಸಮಯವೂ ಸಿಗುವುದಿಲ್ಲ ಎಂದು ಕಾಣುತ್ತದೆ. ಹಾಗಾಗಿ, ಅವರು ಕಲಿಯುತ್ತಿದ್ದಾರೆ ಮತ್ತು ಮುಂದೆ ಸರಿಯಾದ ನಿರ್ವಹಣೆಯನ್ನು ನೀಡುತ್ತಾರೆ. ಸರಿಯಾಗಿ ಹೇಳಬೇಕೆಂದರೆ, ಕಳೆದ ಕೆಲವು ವರ್ಷಗಳಲ್ಲಿ ನಾವು ಸವಾಲಿನ ಪಿಚ್ ಗಳಲ್ಲಿ ಆಡಿದ್ದೇವೆ. ಇದಕ್ಕೆ ಹೊಂದಿಕೊಳ್ಳುವುದು ನಮ್ಮ ಕೆಲವು ಯುವ ಬ್ಯಾಟರ್ ಗಳಿಗೆ ಸವಾಲಾಗಿರುತ್ತದೆ. ಆದರೆ ಅವರಲ್ಲಿ ನೈಪುಣ್ಯವಿದೆ ಮತ್ತು ಸಾಮರ್ಥ್ಯವಿದೆ. ಅವರು ಇಲ್ಲಿಗೆ ಸುಮ್ಮನೆ ಬಂದಿಲ್ಲ. ಅವರು ದೇಶಿ ಕ್ರಿಕೆಟ್ನಲ್ಲಿ ತುಂಬಾ ರನ್ ಗಳನ್ನು ಗಳಿಸಿಯೇ ಇಲ್ಲಿಗೆ ಬಂದಿದ್ದಾರೆ’’ ಎಂದು ಭಾರತ ತಂಡದ ಪ್ರಧಾನ ಕೋಚ್ ನುಡಿದರು.
ಆಂಧ್ರಪ್ರದೇಶದ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಫೆಬ್ರವರಿ 2ರಂದು ಆರಂಭಗೊಳ್ಳಲಿರುವ ಎರಡನೇ ಟೆಸ್ಟ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ.